ಯಲ್ಲಾಪುರದ ಹೆಸ್ಕಾಂ ಅಧಿಕಾರಿ ನಾಗರಾಜ ಆಚಾರಿ ಹಾಗೂ ಲೈನ್‌ಮೆನ್ ಸುನೀಲ ಚಹ್ವಾಣ್ ನಿರ್ಲಕ್ಷದ ಕಾರಣ ಆನಂದ ಸಿದ್ದಿ ಎಂಬಾತರು ಸಾವನಪ್ಪಿದ್ದಾರೆ.
ಯಲ್ಲಾಪುರದ ಹಾಸಣಗಿ ಗ್ರಾಮದ ಅಣಲೇಸರದಲ್ಲಿ ವಿದ್ಯುತ್ ಸಮಸ್ಯೆ ಕಾಣಿಸಿಕೊಂಡಿತ್ತು. ಅದನ್ನು ಬಗೆಹರಿಸಲು ಹೆಸ್ಕಾಂ ಸೆಕ್ಷನ್ ಆಫಿಸರ್ ನಾಗರಾಜ ಆಚಾರಿ ಹಾಗೂ ಆ ಭಾಗದ ಲೈನ್‌ಮೆನ್ ಸುನೀಲ ಚಹ್ವಾಣ್ ತೆರಳಿದ್ದರು. ಹಾಸಣಗಿ ಅಣಲೇಸರದ ಶಂಕರ ಭಟ್ಟರ ಮನೆ ಬಳಿ ವಿದ್ಯುತ್ ಕಂಬ ಏರಲು ಹೆಸ್ಕಾಂ ಸಿಬ್ಬಂದಿ ಬಿಳಕಿಯ ಜಡಗಿನಕೊಪ್ಪದ ಆನಂದ ಸಿದ್ದಿ (25) ಅವರ ಸಹಾಯಪಡೆದರು. ಆನಂದ ಸಿದ್ದಿ ಅವರಿಗೆ ವಿದ್ಯುತ್ ತಂತಿ ಸರಿಪಡಿಸುವ ಬಗ್ಗೆ ಅನುಭವವಿರಲಿಲ್ಲ. ವಿದ್ಯುತ್ ಕಂಬ ಏರಬೇಕಿದ್ದ ವ್ಯಕ್ತಿಗೆ ನೀಡಬೇಕಾದ ಹೆಲ್ಮೆಟ್, ಗಂ ಬೂಟುಗಳನ್ನು ಹೆಸ್ಕಾಂ ಅಧಿಕಾರಿಗಳು ನೀಡಿರಲಿಲ್ಲ.
ಕಂಬ ಏರುವ ಮುನ್ನ ವಿದ್ಯುತ್ ಪ್ರಸರಣವನ್ನು ತೆಗೆದಿರಲಿಲ್ಲ. ಹೀಗಾಗಿ ವಿದ್ಯುತ್ ತಂತಿಯಲ್ಲಿ ಕರೆಂಟ್ ಹರಿಯುತ್ತಿದ್ದು, ಸಣ್ಣ ಮಳೆಯಿದ್ದರೂ ಹೆಸ್ಕಾಂ ಅಧಿಕಾರಿಗಳು ನೀಡಿದ ಏಣಿ ಬಳಸಿ ಆನಂದ ಸಿದ್ದಿ ವಿದ್ಯುತ್ ಕಂಬ ಏರಿದರು. ಕ್ಷಣಮಾತ್ರದಲ್ಲಿಯೇ ವಿದ್ಯುತ್ ಶಾಕ್ ತಗುಲಿ ಅವರು ಏಣಿ ಜೊತೆ ನೆಲಕ್ಕೆ ಬಿದ್ದರು. ವಿದ್ಯುತ್’ನಿಂದ ಜೀವಕ್ಕೆ ಅಪಾಯವಾಗಬಹುದಾದ ಸನ್ನಿವೇಶವಿದ್ದರೂ ಹೆಸ್ಕಾಂ ಅಧಿಕಾರಿ ಹಾಗೂ ಸಿಬ್ಬಂದಿ ರಕ್ಷಣಾ ಸಾಮಗ್ರಿ ವಿತರಿಸಲಿಲ್ಲ.
ಇದೇ ಕಾರಣದಿಂದ ಆನಂದ ಸಿದ್ದಿ ಸಾವನಪ್ಪಿದರು. ಹೆಸ್ಕಾಂ ಅಧಿಕಾರಿಗಳ ವಿರುದ್ಧ ಆನಂದ ಸಿದ್ದಿ ಅವರ ಅಣ್ಣ ಯೋನಾತನ ಸಿದ್ದಿ ಪೊಲೀಸ್ ಪ್ರಕರಣ ದಾಖಲಿಸಿದರು. ಪಿಎಸ್‌ಐ ಶೇಡಜಿ ಚೌಹಾಣ್ ಅವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳನ್ನು ಬಂಧಿಸುವ ಸಾಧ್ಯತೆಗಳಿವೆ.
Discussion about this post