ಶಿರಸಿ-ಮುಂಡಗೋಡು ಗಡಿ ಭಾಗದ ಬೆಡಸಗಾಂವಿನಲ್ಲಿ ಕಾರ್ಮಿಕರನ್ನು ಕೆಲಸಕ್ಕೆ ಕರೆದೊಯ್ಯುತ್ತಿದ್ದ ವಾಹನದ ಮೇಲೆ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ಸಾವು-ನೋವಿನ ಅನಾಹುತ ನಡೆದಿಲ್ಲ.
`ಬಡವ ಸಾಕಿದ ಬಹುದ್ದೂರ್ ಹುಲಿ’ ಎಂಬ ಟಾಟಾ ಎಸ್ ಮಾದರಿಯ ವಾಹನದಲ್ಲಿ 10ಕ್ಕೂ ಅಧಿಕ ಕಾರ್ಮಿಕರನ್ನು ಕರೆದೊಯ್ಯಲಾಗುತ್ತಿತ್ತು. ಆ ಕಾರ್ಮಿಕರೆಲ್ಲರೂ ರಾಮಾಪುರದಿಂದ ಹುಲೆಕಲ್’ಗೆ ಹೋಗುತ್ತಿದ್ದರು. ಅವರೆಲ್ಲರೂ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹೋಗಬೇಕು ಎಂಬ ಆತುರದಲ್ಲಿದ್ದರು. ಆದರೆ, ಬೆಡಸಗಾಂವಿನ ಬಳಿ ಆ ವಾಹನದ ಮೇಲೆ ವಿದ್ಯುತ್ ಕಂಬ ಮುರಿದು ಬಿದ್ದಿತು.
ಕಂಬ ಮುರಿದ ತಕ್ಷಣ ವಾಹನದಲ್ಲಿದ್ದ ಕಾರ್ಮಿಕರೆಲ್ಲರೂ ತಬ್ಬಿಬ್ಬಾದರು. ಕೂಡಲೇ ಅಲ್ಲಿಗೆ ಧಾವಿಸಿದ ಬೆಡಸಗಾಂವನ ವಿಜಯ ಶಾಂತು ನಾಯ್ಕ ಅವರು ವಿದ್ಯುತ್ ಕಡಿತ ಮಾಡಿಸಿದರು. ವಾಹನದ ಮೇಲೆ ವಿದ್ಯುತ್ ಕಂಬ ಹಾಗೂ ತಂತಿ ಬಿದ್ದಿದ್ದರೂ ಕೂದಲೆಳೆ ಅಂತರದಿoದ ಕಾರ್ಮಿಕರು ಬಚಾವಾದರು.
ತಕ್ಷಣ ವಿದ್ಯುತ್ ಕಡಿತವಾಗಿದ್ದರಿಂದ ಎಲ್ಲರೂ ಪ್ರಾಣ ಉಳಿಸಿಕೊಂಡರು. ಅದಾದ ನಂತರ ಕಾರ್ಮಿಕರು ಇನ್ನೊಂದು ವಾಹನದ ಮೂಲಕ ತಲುಪಬೇಕಾದ ಸ್ಥಳಕ್ಕೆ ತಲುಪಿದರು. ಸದ್ಯ ಹೆಸ್ಕಾಂ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ.
Discussion about this post