ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಸಿದ್ದಾಪುರದ ಗೋಳಿಮಕ್ಕಿ-ಹೇರೂರು ಮಾರ್ಗದ ರಸ್ತೆಯಲ್ಲಿ ಶಿರಸಿ ರಸ್ತೆಯ ಕಾರೆಗುಳಿಯಲ್ಲಿ ಕಲ್ಬಂಡೆ ಬಿದ್ದಿದೆ.
ಲೋಕೋಪಯೋಗಿ ಇಲಾಖೆ ಕಲ್ಬಂಡೆ ತೆರವು ಮಾಡಿದ್ದರೂ, ಇನ್ನಷ್ಟು ಮಣ್ಣು ಕುಸಿತದ ಜೊತೆ ಬಂಡೆಗಳು ಜಾರುವ ಲಕ್ಷಣ ಗೋಚರಿಸಿದೆ. ಸದ್ಯ ಈ ಮಾರ್ಗದ ಸಂಚಾರಕ್ಕೆ ತೊಂದರೆ ಇಲ್ಲ. ಅದಾಗಿಯೂ ಮುನ್ನಚ್ಚರಿಕೆ ಅಗತ್ಯ. ಕಲ್ಬಂಡೆ ಬಿದ್ದಿದ್ದರಿಂದ ಕೆಲ ಕಾಲ ಪ್ರಯಾಣಿಕರು ತೊಂದರೆ ಅನುಭವಿಸಿದರು. ಈ ವಿಷಯ ಅರಿತ ಅಧಿಕಾರಿಗಳು ತಕ್ಷಣ ಕಾರ್ಯಾಚರಣೆ ಶುರು ಮಾಡಿದರು.
ಕಾರಗುಡಿ ಸಮೀಪ ಕಳೆದ ಮಳೆಗಾಲದಲ್ಲಿಯೂ ಗುಡ್ಡ ಕುಸಿತವಾಗಿತ್ತು. ಆಗಲೂ ಸಂಚಾರ ಅಸ್ತವ್ಯಸ್ತವಾಗಿತ್ತು. ಕಳೆದ ಸಲ ರಸ್ತೆಯ ಪಕ್ಕ ಕಲ್ಲಿನ ಬಂಡೆ ಬಿದ್ದಿದ್ದು, ಅಲ್ಲಿದ್ದ ಬಂಡೆಯನ್ನು ತೆರವು ಮಾಡಲಾಗಿತ್ತು. ಸದ್ಯ ಅದೇ ಸ್ಥಳದಲ್ಲಿ ಗುಡ್ಡ ಕುಸಿದಿದ್ದು ಜನರ ಆತಂಕ ಹೆಚ್ಚಾಗಿದೆ. ಮತ್ತಷ್ಟು ಕುಸಿಯುವ ಸಾಧ್ಯತೆಯಿರುವುದರಿಂದ ಮುಂಜಾಗೃತೆ ಕ್ರಮಕ್ಕೆ ಜನ ಆಗ್ರಹಿಸಿದ್ದಾರೆ.
ಉಳಿದಂತೆ, ಸಿದ್ದಾಪುರದ ಹಲವು ಗ್ರಾಮೀಣ ರಸ್ತೆಗಳಲ್ಲಿ ರಸ್ತೆಗೆ ಅಡ್ಡವಾಗಿ ಮರಗಳು ಬಿದ್ದಿವೆ. ಸಣ್ಣಪುಟ್ಟ ಧರೆ ಕುಸಿತ ಸಾಮಾನ್ಯವಾಗಿದೆ. ತಹಸೀಲ್ದಾರ್ ಎಂ ಆರ್ ಕುಲಕರ್ಣಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಶಿಕಾಂತ ಗೌಡ ಮಳೆ ಹಾನಿ ಪ್ರದೇಶದ ಸಂಚಾರ ನಡೆಸುತ್ತಿದ್ದಾರೆ.
Discussion about this post