ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಿಳೆಯರು ಕಾಣೆಯಾಗುವ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಶಿರಸಿ-ಮುಂಡಗೋಡದಲ್ಲಿ ಇಬ್ಬರು ಕಾಣೆಯಾಗಿದ್ದು, ಪೊಲೀಸರು ಅವರ ಹುಡುಕಾಟ ನಡೆಸಿದ್ದಾರೆ.
ಮುಂಡಗೋಡ ಪಟ್ಟಣಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟ ಅಗಡಿ ಗ್ರಾಮದ ಸಾಜೀದಾಬಾನು ಅಕ್ಬರಅಲಿ ಜಿಗಳೂರ (20) ಅವರು ಕಾಣೆಯಾಗಿದ್ದಾರೆ. ಹೊಲಿಗೆ ತರಬೇತಿಪಡೆಯಲು ಮುಂಡಗೋಡಿಗೆ ಬಂದಿದ್ದ ಅವರು ತರಬೇತಿ ಕೇಂದ್ರವನ್ನು ತಲುಪಿಲ್ಲ. ಮರಳಿ ಮನೆಗೂ ಬರಲಿಲ್ಲ.
ಮುಂಡಗೋಡು ಪಟ್ಟಣದ ಜ್ಯೋತಿ ಹೊಲಿಗೆ ಕೇಂದ್ರದಲ್ಲಿ ವಿಚಾರಿಸಿದಾಗ ಸಾಜೀದಾಬಾನು ಅವರ ಬಗ್ಗೆ ಕುಟುಂಬದವರಿಗೂ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಮಗಳನ್ನು ಹುಡುಕಿಕೊಡುವಂತೆ ಅವರ ತಾಯಿ ಪೊಲೀಸರ ಮೊರೆ ಹೋಗಿದ್ದಾರೆ.
ಶಿರಸಿ ತಾಲೂಕಿನ ಮರಾಠಿಕೊಪ್ಪದ ಐಶ್ವರ್ಯ ಸನ್ನಿಕುಮಾರ ನಾಯ್ಕ (27) ಅವರು ಕಾಣೆಯಾಗಿದ್ದಾರೆ. ಮುಂಡಗೋಡಿನ ತವರುಮನೆಯಲ್ಲಿದ್ದ ಐಶ್ವರ್ಯ ಅವರು ಶಿರಸಿಯ ಗಂಡನ ಮನೆಗೆ ಹೊರಟಿದ್ದು, ನಂತರ ಅವರು ಎಲ್ಲಿ ಹೋದರು? ಎಂದು ಯಾರಿಗೂ ಗೊತ್ತಾಗಲಿಲ್ಲ.
ತವರು ಮನೆಯಿಂದ ಹೊರಡುವ ಮುನ್ನ ಅಣ್ಣ, ತಂದೆ, ತಾಯಿಯ ಬಳಿ ಶಿರಸಿಗೆ ಹೋಗುವುದಾಗಿ ಐಶ್ವರ್ಯ ಹೇಳಿದ್ದರು. ಆದರೆ, ಶಿರಸಿಯಲ್ಲಿ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಗಂಡನ ಮನೆಯನ್ನು ತಲುಪಿಲ್ಲ. ಹೀಗಾಗಿ ತನ್ನ ತಂಗಿಯನ್ನು ಹುಡುಕಿ ಕೊಡುವಂತೆ ಮಹಿಳೆಯ ಅಣ್ಣ ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸರು ಕಾಣೆಯಾದ ಈ ಇಬ್ಬರ ಹುಡುಕಾಟ ನಡೆಸುತ್ತಿದ್ದಾರೆ.
Discussion about this post