ಶಿರಸಿಯ ರಾಯಲ್ ಶಿವ ಇವೆಂಟ್ & ಡೆಕೋರೇಟರ್’ಗೆ ಮೋಸ ಮಾಡಿದ ಹಾವೇರಿ ವ್ಯಕ್ತಿ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.
ಶಿರಸಿಯ ಚಿಪಗಿ ಬಳಿಯ ಸೋಮನಳ್ಳಿ ಪ್ರಥ್ವಿರಾಜ ಮಡಿವಾಳ ಅವರು ರಾಯಲ್ ಶಿವ ಇವೆಂಟ್ & ಡೆಕೋರೇಟರ್ ಮಾಲಕರಾಗಿದ್ದಾರೆ. ವಿವಿಧ ಕಾರ್ಯಕ್ರಮಗಳಿಗೆ ಪೆಂಡಾಲ್ ಹಾಕುವುದು, ಖುರ್ಚಿ-ಪಾತ್ರೆ ಒದಗಿಸುವುದು ಸೇರಿ ಅವರು ವಿವಿಧ ಬಗೆಯ ಕೆಲಸ ಮಾಡುತ್ತಾರೆ. ಹಾವೇರಿಯಲ್ಲಿ ಸಹ ಅವರು ಸೇವೆ ನೀಡುತ್ತಿದ್ದು, ಹಣಕಾಸಿನ ವಿಷಯದಲ್ಲಿ ಅಲ್ಲಿಯೇ ಅವರಿಗೆ ಅನ್ಯಾಯವಾಗಿದೆ.
ಹಾವೇರಿಯ ಹಾನಗಲ್’ನ ಮಕರವಳ್ಳಿ ಮಂಜುನಾಥ ತಳ್ಳಗಿನಕೇರಿ ಅವರು ಪ್ರಥ್ವಿರಾಜ ಮಡಿವಾಳ ಅವರಿಗೆ ಒಮ್ಮೆ ಫೋನ್ ಮಾಡಿದ್ದರು. ತಮ್ಮ ಮನೆ ಮದುವೆಗೆ ಪೆಂಡಾಲ್ ಹಾಕಬೇಕು ಎಂದು ಅವರು ತಿಳಿಸಿದ್ದರು. ಅದಕ್ಕಾಗಿ ಪ್ರಥ್ವಿರಾಜ ಮಡಿವಾಳ ಅವರು 4.48 ಲಕ್ಷ ರೂ ವೆಚ್ಚವಾಗುವುದಾಗಿ ಹೇಳಿದ್ದರು. ಆ ಹಣ ನೀಡಲು ಮಂಜುನಾಥ ತಳ್ಳಗಿನಕೇರಿ ಅವರು ಒಪ್ಪಿದ್ದರು.
ಮೇ 9ರಂದು ಹಾವೇರಿಯಲ್ಲಿ ಅದ್ದೂರಿ ಮದುವೆ ನಡೆಯಿತು. ರಾಯಲ್ ಶಿವ ಇವೆಂಟ್ & ಡೆಕೋರೇಟರ್ ಹೆಸರಿನ ಪೆಂಡಾಲ್ ಅಲ್ಲಿ ಜನಮನ್ನಣೆಯನ್ನುಪಡೆಯಿತು. ಮಾರ್ಚ 10ರಂದು ಪೆಂಡಾಲ್ ಹಾಕುವುದಕ್ಕಾಗಿ ಪ್ರಥ್ವಿರಾಜ ಮಡಿವಾಳ ಅವರು ಮುಂಗಡ ಹಣಪಡೆದಿದ್ದರು. ಮದುವೆ ದಿನದವರೆಗೆ 2.50 ಲಕ್ಷ ರೂ ಹಣಪಡೆದಿದ್ದು, ಮದುವೆ ಮುಗಿದ ನಾಲ್ಕು ದಿನದ ನಂತರ ಪೆಂಡಾಲ್ ತೆಗೆಯಲು ಹೋಗಿದ್ದರು.
ಆಗ ಅಲ್ಲಿಗೆ ಬಂದ ಮದುವೆ ಮನೆ ಮಾಲಕ ಮಂಜುನಾಥ ತಳ್ಳಗಿನಕೇರಿ ಬಾಕಿ ಹಣ ಕೊಡಲು ನಿರಾಕರಿಸಿದರು. ಪ್ರಥ್ವಿರಾಜ ಮಡಿವಾಳ ಅವರಿಗೆ ಕೆಟ್ಟದಾಗಿ ಬೈದರು. ಅಲ್ಲಿಂದ ಪ್ರಥ್ವಿರಾಜ್ ಮಡಿವಾಳ ಅವರನ್ನು ಹೊರದಬ್ಬಿದರು. ದುಡಿದ ಹಣ ಕೊಡಿ ಎಂದು ಅಂಗಲಾಚಿದರೂ ಮಂಜುನಾಥ ತಳ್ಳಗಿನಕೇರಿ ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ.
ತಮಗಾದ ಅನ್ಯಾಯವ ವಿರುದ್ಧ ಪ್ರಥ್ವಿರಾಜ ಮಡಿವಾಳ ಅವರು ನ್ಯಾಯಾಲಯದ ಮೊರೆ ಹೋದರು. ನ್ಯಾಯಾಲಯದ ಸೂಚನೆ ಮೇರೆ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ಶುರು ಮಾಡಿದ್ದಾರೆ.
Discussion about this post