ಐಷಾರಾಮಿ ಕಾರಿನಲ್ಲಿ ಅಕ್ರಮವಾಗಿ ಅಗ್ಗದ ಮದ್ಯ ಸಾಗಿಸುತ್ತಿದ್ದ ಯಲ್ಲಾಪುರದ ಯುವಕರಿಬ್ಬರು ಗೋವಾ ಗಡಿಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಆಗ, ಅಧಿಕಾರಿಗಳ ಕಾಲಿಗೆ ಬಿದ್ದ ಅವರಿಬ್ಬರು `ತಮಗೆ ಮದುವೆ ನಿಶ್ಚಯವಾಗಿದೆ. ಬಿಟ್ಟು ಬಿಡಿ’ ಎಂದು ಅಂಗಲಾಚಿದ್ದು, ಅಧಿಕಾರಿಗಳು ಅವರನ್ನು ಬಿಟ್ಟು ಕಳುಹಿಸಿದ್ದಾರೆ!
ಗೋವಾದಿಂದ ಕರ್ನಾಟಕಕ್ಕೆ ಅತಿ ಹೆಚ್ಚು ಪ್ರಮಾಣದಲ್ಲಿ ಮದ್ಯ ಸಾಗಾಣಿಕೆಯಾಗುತ್ತದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಹಾನಿಯಾಗುತ್ತಿದ್ದರೂ ಅಬಕಾರಿ ಸಿಬ್ಬಂದಿ `ತಮಗೂ ಇದಕ್ಕೂ ಸಂಬoಧವಿಲ್ಲ’ ಎಂದು ಮೌನವಾಗಿದ್ದಾರೆ. ಗಡಿಭಾಗದಲ್ಲಿ ಅಬಕಾರಿ ಸಿಬ್ಬಂದಿ ಕಟ್ಟುನಿಟ್ಟಾಗಿದ್ದರೆ ಗೂಡಂಗಡಿಗಳಲ್ಲಿ ಗೋವಾ ಮದ್ಯ ಸಿಗುತ್ತಿರಲಿಲ್ಲ. ಪೊಲೀಸರು ಸಹ ಗೂಡಂಗಡಿಗಳ ಮೇಲೆ ನಿರಂತರ ದಾಳಿ ನಡೆಸುತ್ತಿರಲಿಲ್ಲ.
ಮೊನ್ನೆ ಚಿದಂಬರ ಹಾಗೂ ಸೂರ್ಯ (ಹೆಸರು ಬದಲಿಸಿದೆ) ಎಂಬಾತರು ಗೋವಾಗೆ ಹೋಗಿದ್ದರು. ಅಲ್ಲಿ ಅವರಿಬ್ಬರು ಮರಳಿ ಬರುವಾಗ ತಮ್ಮ ಕಾರಿನಲ್ಲಿ ಬಗೆ ಬಗೆಯ ಮದ್ಯ ಖರೀದಿಸಿದ್ದರು. `ಐಷಾರಾಮಿ ಕಾರನ್ನು ಅಧಿಕಾರಿಗಳು ತಪಾಸಣೆ ಮಾಡುವುದಿಲ್ಲ’ ಎಂದು ಗೋವಾ ಮದ್ಯದಂಗಡಿ ಮಾಲಕ ಹೇಳಿದ ಮಾತು ಕೇಳಿ ಇನ್ನಷ್ಟು ಮದ್ಯದ ಬಾಟಲಿಗಳನ್ನು ಅವರು ಕಾರಿನ ಡಿಕ್ಕಿಯಲ್ಲಿ ತುಂಬಿಸಿದ್ದರು. ಅದಾದ ನಂತರ ಆ ಮದ್ಯದಂಗಡಿ ಮಾಲಕನೇ ಅಬಕಾರಿ ಸಿಬ್ಬಂದಿಗೆ ಫೋನ್ ಮಾಡಿ ಅಕ್ರಮ ಮದ್ಯ ಸಾಗಾಟದ ಮಾಹಿತಿ ನೀಡಿದ್ದರು.
ಗೋವಾ ಗಡಿಯಲ್ಲಿ ಅವರ ಕಾರನ್ನು ಯಾರೂ ತಡೆಯಲಿಲ್ಲ. ಆದರೆ, ರ‍್ನಾಟಕದ ಗಡಿಯಲ್ಲಿ ಕಾದಿದ್ದ ಅಬಕಾರಿ ಅಧಿಕಾರಿಗಳು ಕಾರಿಗೆ ಅಡ್ಡಲಾಗಿ ಕೈ ಮಾಡಿದರು. ತೆರಿಗೆ ತಪ್ಪಿಸಿ ಮದ್ಯ ತಂದಿರುವುದನ್ನು ಪ್ರಶ್ನಿಸಿದರು. ಆಗ, ಚಿದಂಬರ ಹಾಗೂ ಸೂರ್ಯ ಇಬ್ಬರೂ ಅಧಿಕಾರಿಗಳ ಕಾಲಿಗೆ ಬಿದ್ದರು. `ನಮಗೆ ಮದುವೆ ನಿಶ್ವಯವಾಗಿದೆ. ಬಿಟ್ಟುಬಿಡಿ’ ಎಂದು ಕೈ ಮುಗಿದರು. `ಅದು-ಇದು’ ಮಾತನಾಡಿದ ಅಧಿಕಾರಿಗಳು ಕೊನೆಗೆ ಇಬ್ಬರ ಪೈಕಿ ಒಬ್ಬನ ಮೇಲೆ ಮಾತ್ರ ಪ್ರಕರಣ ದಾಖಲಿಸಿದರು. ಆದರೆ, ಕಾರನ್ನು ವಶಕ್ಕೆಪಡೆಯಲಿಲ್ಲ. ಡ್ರಿಂಕ್ & ಡ್ರೆವ್ ಬಗ್ಗೆ ಪೊಲೀಸರಿಗೂ ಮಾಹಿತಿ ಕೊಡಲಿಲ್ಲ.
ಯಲ್ಲಾಪುರಕ್ಕೆ ಬಂದ ಆ ಹುಡುಗರಿಬ್ಬರೂ ಅಬಕಾರಿ ಸಿಬ್ಬಂದಿಯಿoದ ತಪ್ಪಿಸಿಕೊಂಡ ಕಥೆಯನ್ನು ಸ್ನೇಹಿತರ ಬಳಿ ಹೇಳಿದ್ದು, ಮದುವೆ ಮಕ್ಕಳ ಕಥೆ ಇದೀಗ ಎಲ್ಲಡೆ ಹರಿದಾಡುತ್ತಿದೆ. ಅಬಕಾರಿ ಸಿಬ್ಬಂದಿ ಜೊತೆ ನಡೆದ `ಮಾತುಕತೆ’ಯನ್ನು ಸಹ ಆ ಯುವಕರಿಬ್ಬರು ರಸವತ್ತಾಗಿ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆದರೆ, ಈ ಪ್ರಕರಣದ ಬಗ್ಗೆ ಸರಿಯಾದ ಮಾಹಿತಿ ನೀಡಲು ಅಬಕಾರಿ ಅಧಿಕಾರಿಗಳು ಹಿಂದೇಟು ಹಾಕಿದರು.
ಕೊನೆಗೆ `ಅದೊಂದು ಸಣ್ಣ ಪ್ರಕರಣ. ಹೀಗಾಗಿ ಮಾಧ್ಯಮಕ್ಕೆ ಮಾಹಿತಿ ನೀಡಲಿಲ್ಲ. ಕಾರಿನಲ್ಲಿ ಬಂದವರನ್ನು ವಿಚಾರಣೆಗೊಳಪಡಿಸಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಅಬಕಾರಿ ಡಿವೈಎಸ್ಪಿ ರಮೇಶ ಭಜಂತ್ರಿ ತಿಳಿಸಿದರು. ಪ್ರಕರಣದ ಬಗ್ಗೆ ಡಿವೈಎಸ್‌ಪಿ ಮಾಹಿತಿ ನೀಡಿದರೂ, `ಮಾಧ್ಯಮಕ್ಕೆ ಮಾಹಿತಿ ನೀಡಬೇಕು ಎಂಬ ನಿಯಮವಿಲ್ಲ’ ಎಂದು ಅಬಕಾರಿ ಇನ್ಸಪೆಕ್ಟರ್ ಹಾರಿಕೆ ಉತ್ತರ ನೀಡಿದ್ದು, ಅದು ಸಹ ಇನ್ನಷ್ಟು ಅನುಮಾನಕ್ಕೆ ಆಸ್ಪದ ನೀಡಿದೆ.
ಇನ್ನೂ, ಶನಿವಾರ ಬೈಕಿನಲ್ಲಿ ಮದ್ಯ ಸಾಗಿಸಿದವರನ್ನು ಅಬಕಾರಿ ಸಿಬ್ಬಂದಿ ಹಿಡಿದಿದ್ದಾರೆ. ಇಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ. ಆದರೆ, ಅದನ್ನು ಸಾಧನೆ ಎಂದು ಬಿಂಬಿಸಿ ಅಬಕಾರಿ ಅಧಿಕಾರಿಗಳು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಐಷಾರಾಮಿ ಕಾರಿನಲ್ಲಿ ಮದ್ಯ ಸಾಗಿಸಿದವರು ಸಿಕ್ಕಿಬಿದ್ದರೂ ಅವರ ಬಗ್ಗೆ ಅಬಕಾರಿ ಅಧಿಕಾರಿಗಳು ಬಾಯ್ಬಿಟ್ಟಿಲ್ಲ. ಕಾರಿನಲ್ಲಿದ್ದವರ ಬಗ್ಗೆ ಅಧಿಕಾರಿಗಳು ಅನುಸರಿಸಿದ ಮೃದು ಧೋರಣೆ ಹಾಗೂ ಊರಿಗೆ ಬಂದ ಯುವಕರಿಬ್ಬರು ಅಲ್ಲಿ ನಡೆದ ವಿದ್ಯಮಾನಗಳ ಬಗ್ಗೆ ಹೇಳಿಕೊಂಡ ಕಥೆ ಅಬಕಾರಿ ಅಧಿಕಾರಿಗಳ ರ‍್ಯಕ್ಷಮತೆಯನ್ನು ಪ್ರಶ್ನಿಸುವ ಹಾಗಿದೆ.
Discussion about this post