ಶಿರಸಿ ಮತ್ತಿಘಟ್ಟಾ ಬಳಿಯ ಜೋಗನ ಹಕ್ಕಲು ಜಲಪಾತದಲ್ಲಿ ಕಣ್ಮರೆಯಾಗಿದ್ದ ಪವನ್ ಜೋಗಿ ಅವರ ಶವ ಶನಿವಾರ ಅಂಕೋಲಾದಲ್ಲಿ ಸಿಕ್ಕಿದೆ.
ಜೂನ್ 22ರಂದು ಪವನ್ ಅವರು ಗೆಳೆಯನ ಜೊತೆ ಜಲಪಾತ ವೀಕ್ಷಣೆಗೆ ಹೋಗಿದ್ದರು. ಹಳ್ಳ ದಾಡುವಾಗ ಕಾಲು ಜಾರಿ ನೀರಿಗೆ ಬಿದ್ದ ಅವರು ಕಾಣೆಯಾಗಿದ್ದರು. ನಿರಂತರ ಹುಡುಕಾಟ ನಡೆಸಿದರೂ ಪವನ್ ಸುಳಿವು ಸಿಕ್ಕಿರಲಿಲ್ಲ. ಎನ್‌ಡಿಆರ್‌ಎಫ್ ತಂಡದವರು ಸಹ ಆಗಮಿಸಿ ಎರಡು ದಿನ ಹುಡುಕಾಟ ನಡೆಸಿದ್ದರು.
ಶನಿವಾರ ಅಂಕೋಲಾ ತಾಲೂಕಿನ ಡೋಂಗ್ರಿ ಬಳಿಯ ಮಳಲಗಾಂವಿನಲ್ಲಿ ಶವವೊಂದು ಸಿಕ್ಕಿದ್ದು, ಅದು ಪವನ್ ಅವರ ದೇಹ ಎಂಬುದು ಖಚಿತವಾಯಿತು. ಶನಿವಾರ ಸಿಕ್ಕ ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿತ್ತು. ಆದರೆ, ಕಿವಿಯಲ್ಲಿದ್ದ ನಕ್ಷತ್ರ ಆಕಾರದ ಒಲೆ ದೇಹದ ಗುರುತಿಗೆ ಸಹಾಯವಾಯಿತು. ಮಾರಿಕಾಂಬಾ ಲೈಫ್ ಗಾರ್ಡಿನವರು ಸಾಕಷ್ಟು ಹುಡುಕಾಟ ನಡೆಸಿದ್ದು, ಊರಿನವರು ಸಹ ಕಾರ್ಯಾಚರಣೆಗೆ ನೆರವಾಗಿದ್ದರು.
ಪವನ್ ಇನ್ನಿಲ್ಲ ಎಂಬ ವಿಷಯ ಅರಿತ ಕುಟುಂಬದವರು ಕುಸಿದುಬಿದ್ದರು. ಊರಿನವರು ಅವರಿಗೆ ಸಮಾಧಾನ ಮಾಡಿ ಮನೆಗೆ ಕರೆದೊಯ್ದರು. ಮರಣೋತ್ತರ ಪರೀಕ್ಷೆ ನಂತರ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗುತ್ತದೆ.
Discussion about this post