ಕಾರವಾರ ತಹಶೀಲ್ದಾರ್ ಕಚೇರಿಗೆ ಗುಂಪಿನಲ್ಲಿ ನುಗ್ಗಿ ಲೈವ್ ವಿಡಿಯೋ ಮಾಡಿದ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸರ್ಕಾರಿ ಕಚೇರಿಯಲ್ಲಿ ದಾಂಧಲೆ ನಡೆಸಿದನ್ನು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಖಂಡಿಸಿದ್ದಾರೆ.
ಜೂನ್ 25ರಂದು ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷ ವಿನಾಯಕ ನಾಯ್ಕ ಅವರು ಕಾರವಾರ ತಹಶೀಲ್ದಾರ್ ಕಚೇರಿಗೆ ಆಗಮಿಸಿದ್ದರು. `ಲಂಚ ಮುಕ್ತ ಅಭಿಯಾನ’ ನಡೆಸುವುದಾಗಿ ಅಲ್ಲಿದ್ದವರಿಗೆ ತಿಳಿಸಿ ವಿವಿಧ ದಾಖಲೆಗಳ ಬಗ್ಗೆ ಪ್ರಶ್ನಿಸಿದ್ದರು. ಜೊತೆಗೆ ಅಲ್ಲಿ ನಡೆದ ಘಟನಾವಳಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಲೈವ್ ವಿಡಿಯೋ ಮಾಡಿದ್ದರು.
ಇದರಿಂದ ಮಹಿಳಾ ನೌಕರರಿಗೆ ಸಮಸ್ಯೆಯಾಗಿದೆ ಎಂಬುದು ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ್ ಪ್ರತಾಪ ರಾಣೆ ಅವರ ದೂರು. ಹೀಗಾಗಿ ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷ ವಿನಾಯಕ ನಾಯ್ಕ, ರಾಜೇಶ ನಾಯ್ಕ, ನೀಲಕಂಠ ಎನ್ ಹಾಗೂ ಇತರೆ ಕಾರ್ಯಕರ್ತರ ವಿರುದ್ಧ ಅವರು ಪ್ರಕರಣ ದಾಖಲಿಸಿದ್ದಾರೆ.
ಜನಶಕ್ತಿ ವೇದಿಕೆ ಖಂಡನೆ:
`ನಾನು ಸಹ ಸಾಕಷ್ಟು ಸಲ ಭ್ರಷ್ಟಾಚಾರ ವಿರೋಧಿ ಆಂದೋಲನ ನಡೆಸಿದ್ದೇನೆ. ಆದರೆ, ಅಧಿಕಾರಿಗಳ ಜೊತೆ ಅನುಚಿತವಾಗಿ ವರ್ತಿಸಿಲ್ಲ. ಹಳದಿ-ಕೆಂಪು ಬಣ್ಣದ ಟಿ ಶರ್ಟ್ ಧರಿಸಿದ ಜನ ಪಕ್ಷದ ಪದಾಧಿಕಾರಿ ಎಂದು ಸರ್ಕಾರಿ ಕಚೇರಿಯಲ್ಲಿ ಭಯದ ವಾತಾವರಣ ನಿರ್ಮಿಸುವುದು ಸರಿಯಲ್ಲ’ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಹೇಳಿದ್ದಾರೆ.
`ದಾಖಲೆಗಳನ್ನು ಪ್ರಶ್ನಿಸಲು ಕಾಯ್ದೆಯಲ್ಲಿ ನ್ಯಾಯಯುತ ಅವಕಾಶವಿದೆ. ಅದನ್ನು ಬಳಸುವ ಬದಲು ದಿಢೀರ್ ಆಗಿ ಕಚೇರಿಗೆ ನುಗ್ಗಿ ಹೆದರಿಸುವುದನ್ನು ಸಹಿಸುವುದಿಲ್ಲ’ ಎಂದವರು ಹೇಳಿದ್ದಾರೆ.
`ಸರ್ಕಾರಿ ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿದ್ದು, ಕೆಲಸ ನಿಧಾನವಾಗುತ್ತಿದೆ. ಅದರಲ್ಲಿ ಅಧೀನ ಅಧಿಕಾರಿ-ಸಿಬ್ಬಂದಿ ತಪ್ಪಿರುವುದಿಲ್ಲ. ಆದರೆ, ಈ ಜನ ಕೆಳ ಹಂತದ ನೌಕರರನ್ನು ಹೆದರಿಸುತ್ತಿದ್ದಾರೆ’ ಎಂದು ಮಾಧವ ನಾಯಕ ಅವರು ಹೇಳಿದ್ದಾರೆ.
` ಸರ್ಕಾರಿ ಅಧಿಕಾರಿ-ಸಿಬ್ಬಂದಿ ಈ ಘಟನೆಯಿಂದ ವಿಚಲಿತರಾಗುವುದು ಬೇಡ. ಸಾರ್ವಜನಿಕರು ನಿಮ್ಮೊಂದಿಗೆ ಇದ್ದಾರೆ’ ಎಂದು ಧೈರ್ಯ ಹೇಳಿದ್ದಾರೆ.
ಕೆಆರ್‌ಎಸ್ ಪಕ್ಷದವರು ಮಾಡಿದ್ದೇನು? ಮಾಧವ ನಾಯಕರು ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ..
Discussion about this post