ಯಲ್ಲಾಪುರ ಪಟ್ಟಣ ಪಂಚಾಯತ ಸದಸ್ಯ ಸೋಮೇಶ್ವರ ನಾಯ್ಕ ವಿರುದ್ಧ ದಾಖಲಾದ ಪ್ರಕರಣವೊಂದಕ್ಕೆ ಧಾರವಾಡ ಹೈಕೋರ್ಟ ತಡೆಯಾಜ್ಞೆ ನೀಡಿದೆ.
ಸೋಮೇಶ್ವರ ನಾಯ್ಕ ಅವರು ತಮ್ಮ ವಾಟ್ಸಪ್ ಸ್ಟೇಟಸ್ಸಿನಲ್ಲಿ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರ ವಿರುದ್ಧ ಅವಹೇಳನಕಾರಿ ಪದ ಬಳಸಿದ ಆರೋಪ ಎದುರಿಸುತ್ತಿದ್ದರು. ವಾಟ್ಸಪ್ ಸ್ಟೇಟಸ್ ನೋಡಿದ ಹೆಬ್ಬಾರ್ ಅವರ ಅಭಿಮಾನಿ ಬಾಲು ನಾಯ್ಕ ಅವರು ಪೊಲೀಸ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕುಮಟಾ ಕಡೆ ಹೋಗುತ್ತಿದ್ದ ಸೋಮೇಶ್ವರ ನಾಯ್ಕ ಅವರನ್ನು ವಶಕ್ಕೆಪಡೆದಿದ್ದರು.
`ಶಾಸಕರ ವಿರುದ್ಧ ಅವಹೇಳನಕಾರಿ ಪದ ಬಳಸಿದಕ್ಕಾಗಿ ಶಿವರಾಮ ಹೆಬ್ಬಾರ್ ಅವರ ಅಭಿಮಾನಿಗಳಿಗೆ ನೋವಾಗಿದೆ’ ಎಂದು ಬಾಲು ನಾಯ್ಕ ಅವರು ದೂರಿದ್ದರು. ಈ ಪ್ರಕರಣದಲ್ಲಿ ಜಾಮೀನುಪಡೆದ ಸೋಮೇಶ್ವರ ನಾಯ್ಕ ಅವರು ಧಾರವಾಡ ಹೈಕೋರ್ಟ ಮೊರೆ ಹೋಗಿದ್ದರು. `ತಮ್ಮ ಮೇಲೆ ಅನಗತ್ಯವಾಗಿ ಪ್ರಕರಣ ದಾಖಲಿಸಲಾಗಿದೆ’ ಎಂದು ಅವರು ನ್ಯಾಯವಾದಿ ಸೌರಬ ಹೆಗಡೆ ಅವರ ಮೂಲಕ ನ್ಯಾಯಾಲಯದ ಮುಂದೆ ವಾದಿಸಿದ್ದರು.
`ಪ್ರಕರಣವನ್ನು ರದ್ದು ಮಾಡಬೇಕು’ ಎಂದು ಸೋಮೇಶ್ವರ ನಾಯ್ಕ ಅವರು ಮನವಿ ಮಾಡಿಕೊಂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ಈ ತನಿಖೆಗೆ ತಡೆಯಾಜ್ಞೆ ನೀಡಿದೆ. `ಬಾಲು ನಾಯ್ಕ ಅವರು ಶಿವರಾಮ ಹೆಬ್ಬಾರ್ ಅವರ ಕಾರು ಚಾಲಕರಾಗಿದ್ದರು. ಶಿವರಾಮ ಹೆಬ್ಬಾರ್ ಅವರು ಚಾಲಕನ ಮೂಲಕ ದುರುದ್ದೇಶದಿಂದ ಈ ದೂರು ದಾಖಲಿಸಿದ್ದಾರೆ’ ಎಂದು ಸೌರಭ ಹೆಗಡೆ ಅವರು ನ್ಯಾಯಾಲಯದ ಮುಂದೆ ವಾದಿಸಿದ್ದರು. ಇದೇ ಆಧಾರದಲ್ಲಿ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
Discussion about this post