ಕಾರವಾರದ ಸದಾಶಿವಗಡದಲ್ಲಿರುವ ದುರ್ಗಾಮಾತಾ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದ್ದು, ಠೇವಣಿದಾರರು ದಿಕ್ಕೆಟ್ಟಿದ್ದಾರೆ. ತಮ್ಮ ಠೇವಣಿ ತಮಗೆ ಮರಳಿಸಿ ಎಂದು ಅವರು ಪಟ್ಟು ಹಿಡಿದಿದ್ದಾರೆ.
`ದುರ್ಗಾಮಾತಾ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘ 13 ಶಾಖೆ ಹೊಂದಿದ್ದು, ಜನ ನಂಬಿಕೆಯಿoದ ಹೂಡಿಕೆ ಮಾಡಿದ್ದರು. ಆದರೆ, ಜನವರಿ 2025ರಿಂದ ಯಾವುದೇ ಠೇವಣಿ ಹಣವನ್ನು ಹಿಂತಿರುಗಿಸುತ್ತಿಲ್ಲ’ ಎಂದು ಅಜಿತ್ ನಾಯ್ಕ ಆಕ್ರೋಶವ್ಯಕ್ತಪಡಿಸಿದರು. `ಸೊಸೈಟಿಯಲ್ಲಿ ಕಳೆದ ಎರಡು ವರ್ಷಗಳಿಂದ ಆಡಿಟ್ ನಡೆದಿಲ್ಲ. 56 ಕೋಟಿ ಠೇವಣಿ ಸಂಗ್ರಹವಾದರೂ 6 ಕೋಟಿಯ ಲೆಕ್ಕವಿಲ್ಲ. ಠೇವಣಿ ಹಣ ಹಿಂದಿರುಗಿಸಲು ಹಣವಿಲ್ಲ ಎನ್ನುತ್ತಿದ್ದಾರೆ’ ಎಂದು ಅಳಲು ತೋಡಿಕೊಂಡರು.
`ಏಪ್ರಿಲ್ 30ರೊಳಗೆ ಹಣ ನೀಡುವುದಾಗಿ ಸಂಘ ಭರವಸೆ ನೀಡಿತ್ತು. ಆದರೆ, ಲಿಖಿತ ಭರವಸೆಯನ್ನು ಈಡೇರಿಸಿಲ್ಲ. ಜೂನ್ 25ರ ಬೆಳಗ್ಗೆ 9 ಗಂಟೆಯಿoದ ಸಂಜೆ 3 ಗಂಟೆಯವರೆಗೆ ಪ್ರಧಾನ ಕಚೇರಿಯಲ್ಲಿ ಠೇವಣಿದಾರರು ಕಾದಿದ್ದರೂ ಯಾವುದೇ ಹಣ ಸಿಕ್ಕಿಲ್ಲ’ ಎಂದು ವೆಂಕಟರಮಣ ಹರಿಕಾಂತ ದೂರಿದರು. `ಆ ಸಂದರ್ಭದಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಲಿಂಗರಾಜು ಪುಟ್ಟು ಕಲ್ಲುಟಕರ ಅವರು ಕಚೇರಿಯಲ್ಲಿ ಇರಲಿಲ್ಲ. ದೂರವಾಣಿ ಸಂಪರ್ಕಕ್ಕೂ ಸಿಗಲಿಲ್ಲ. ಆಗ ಉಪಾಧ್ಯಕ್ಷೆ ದೀಕ್ಷಾ ದತ್ತಾರಾಮ ಕಲ್ಲುಟಕರ ಮತ್ತು ವ್ಯವಸ್ಥಾಪಕ ನಿರ್ದೇಶಕರ ಅಕ್ಕ ಹಾಗೂ ಅಕೌಂಟೆoಟ್ ಆಗಿರುವ ಅರ್ಪಿತಾ ಅಂಬರೀಶ ಕಲ್ಲುಟಕರ ಅವರು ಮಧ್ಯಾಹ್ನ 12:30ರೊಳಗೆ ಮುಖ್ಯ ಕಚೇರಿಗೆ ಹಣ ಬರುವುದಾಗಿ ತಿಳಿಸಿದ್ದರು. ನಂತರ ಸಂಜೆ 4:30 ರೊಳಗೆ ಖಾತೆಗೆ ವರ್ಗಾಯಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಯಾವುದೇ ಹಣ ಖಾತೆಗೆ ಜಮಾ ಆಗಿಲ್ಲ’ ಎಂದು ವಿವರಿಸಿದರು.
`ಸಂಘದ ಉಪಾಧ್ಯಕ್ಷೆ ದೀಕ್ಷಾ ದತ್ತಾರಾಮ ಕಲ್ಲುಟಕರ ಅವರೊಂದಿಗೆ ಚಿತ್ತಾಕುಲ ಪೊಲೀಸ್ ಠಾಣೆಗೆ ತೆರಳಿ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ದೂರು ದಾಖಲಿಸಲು ಪ್ರಯತ್ನಿಸಿದಾಗ, ಠಾಣಾಧಿಕಾರಿಗಳು ದೂರು ಸ್ವೀಕರಿಸಿಲ್ಲ’ ಎಂದು ಅಜಿತ್ ನಾಯ್ಕ ದೂರಿದರು. ತದನಂತರ, ಜೂನ್ 25, 2025ರಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಬೋರ್ಡ್ ಆಫ್ ಡೈರೆಕ್ಟರ್ಸ್ ಮತ್ತು ಶಾಖಾ ವ್ಯವಸ್ಥಾಪಕರು ಈ ವಂಚನೆಯಲ್ಲಿ ಶಾಮೀಲಾಗಿದ್ದಾರೆ. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.
ಮನೋಜ ನಾಯ್ಕ, ಅಕ್ಷತಾ ಬೆಳೂರಕರ್, ರೋಹಿದಾಸ ತಾಮ್ಸೆ, ಮತ್ತು ಶಗುಪ್ತಾ ತಾಳಿಕೋಟೆ ಇತರರಿದ್ದರು.
Discussion about this post