ನೆಲಕ್ಕೆ ಕಟ್ಟಿದ ಪಾಚಿ ಮೇಲೆ ನಡೆದಾಡುತ್ತಿರುವಾಗ ಜಾರಿ ಬಿದ್ದ ಹೊನ್ನಾವರದ ನಾಗರತ್ನ ಶೇಟ್ ಅವರು ವಿದ್ಯುತ್ ಸ್ಪರ್ಶದಿಂದ ಸಾವನಪ್ಪಿದ್ದಾರೆ. ನೆಲಕ್ಕೆ ಬೀಳುವಾಗ ಕಟ್ಟಿಗೆ ಎಂದು ಭಾವಿಸಿ ವಿದ್ಯುತ್ ತಂತಿಯನ್ನು ಅವರು ಹಿಡಿದುಕೊಂಡಿದ್ದು, ಅವಘಡಕ್ಕೆ ಕಾರಣವಾಗಿದೆ.
ಹೊನ್ನಾವರದ ದುರ್ಗಾಕೇರಿಯಲ್ಲಿ ನಾಗರತ್ನ ಶೇಟ್ ಅವರು ಕುಟುಂಬದವರ ಜೊತೆ ವಾಸವಾಗಿದ್ದರು. ಜೂನ್ 27ರಂದು ಅವರು ಮನೆ ಹಿಂದಿನ ಬಾವಿಯ ಪಂಪ್ ಸೆಟ್ ಚಾಲು ಮಾಡಿದ್ದರು. ಅದಾದ ನಂತರ ಬಟ್ಟೆ ತೊಳೆಯುವ ಕೆಲಸ ಮುಗಿಸಿದ್ದರು. ಪಾತ್ರೆ ತೊಳೆಯಲು ನಡೆದು ಹೋಗುವಾಗ ನೆಲಕ್ಕೆ ಕಟ್ಟಿದ್ದ ಪಾಚಿ ತಾಗಿ ಅವರು ಜಾರಿ ಬಿದ್ದರು.
ಜಾರಿ ಬೀಳುವ ವೇಳೆ ಎದ್ದು ನಿಲ್ಲಲು ಕಟ್ಟಿಗೆ ಹುಡುಕಿದರು. ಕಟ್ಟಿಗೆ ಎಂದು ಭಾವಿಸಿ ಅಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಯನ್ನು ಗಟ್ಟಿಯಾಗಿ ಹಿಡಿದರು. ಅವರೇ ಚಾಲು ಮಾಡಿದ್ದ ಪಂಪ್‌ಸೆಟ್ಟಿನ ತಂತಿ ಅದಾಗಿದ್ದು, ವಿದ್ಯುತ್ ಆಘಾತದಿಂದ ಪಾಚಿಯ ಮೇಲೆಯೇ ಕುಸಿದು ಬಿದ್ದರು.
ನಾಗರತ್ನ ಶೇಟ್ ಅವರನ್ನು ಚಿಕಿತ್ಸೆಗಾಗಿ ಹೊನ್ನಾವರ ಆಸ್ಪತ್ರೆಗೆ ಕರೆತರಲಾಯಿತು. ಆದರೆ, ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ದಾರಿ ಮದ್ಯೆಯೇ ಅವರು ಉಸಿರಾಟ ನಿಲ್ಲಿಸಿರುವ ಬಗ್ಗೆ ವೈದ್ಯರು ತಿಳಿಸಿದರು. ಪತ್ನಿ ಸಾವಿನ ಬಗ್ಗೆ ಮರುಕವ್ಯಕ್ತಪಡಿಸಿದ ಮಂಜುನಾಥ ಶೇಟ್ ಅವರು ಹೊನ್ನಾವರ ಪೊಲೀಸ್ ಠಾಣೆಗೆ ತೆರಳಿ ನಡೆದ ವಿಷಯ ಹೇಳಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡರು.
Discussion about this post