ಶಾಲಾ ಮಕ್ಕಳ ಬಗ್ಗೆ ಕಿಂಚಿತ್ತು ಕನಿಕರವಿಲ್ಲದ ಬಾಡ ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಕಮಲಾ ಹರಿಕಂತ್ರ ಅವರು ಕುಮಟಾದ ಹುಬ್ಬಣಗೆರಿಯಲ್ಲಿ ಶಾಲೆ ಪಕ್ಕದಲ್ಲಿಯೇ ತ್ಯಾಜ್ಯ ಎಸೆಯುವ ಶೆಡ್ ನಿರ್ಮಿಸಿದ್ದಾರೆ. ಪರಿಣಾಮ ಇಡೀ ದಿನ ಶಾಲಾ ಮಕ್ಕಳು ದುರ್ವಾಸನೆಯಲ್ಲಿ ಕಾಲ ಕಳೆಯಬೇಕಾಗಿದೆ.
ಸರ್ಕಾರಿ ಶಾಲೆಗಳು ಮಕ್ಕಳ ಕೊರತೆ ಅನುಭವಿಸುತ್ತಿರುವ ದಿನದಲ್ಲಿಯೂ ಹುಬ್ಬಣಗೆರಿಯಲ್ಲಿ ಉತ್ತಮ ಶೈಕ್ಷಣಿಕ ವಾತಾವರಣವಿದೆ. ಅಲ್ಲಿರುವ ಅಂಗನವಾಡಿ ಹಾಗೂ ಶಾಲೆಯಲ್ಲಿ 140 ಮಕ್ಕಳು ಕಲಿಯುತ್ತಿದ್ದಾರೆ. ಆದರೆ, ಸಾರ್ವಜನಿಕ ಸಮಸ್ಯೆಗೆ ಕಿಂಚಿತ್ತು ಕಿಮ್ಮತ್ತು ನೀಡದ ಅಧಿಕಾರಿಗಳು ಶಾಲೆ ಪಕ್ಕದಲ್ಲಿಯೇ ಹೊಸದಾಗಿ ಕಸ ಎಸೆಯುವ ಗುಂಡಿ ನಿರ್ಮಿಸಿ ಅದಕ್ಕೆ ಪರದೆ ಅಳವಡಿಸಿದ್ದಾರೆ. ಅಲ್ಲಿ ನಿತ್ಯ ಮೀನು-ಮಾಂಸದ ಜೊತೆ ಹಸಿಕಸ-ಒಣಕಸದ ಮಿಶ್ರಣ ಬರುತ್ತಿದ್ದು, ಮಕ್ಕಳು ರೋಗ-ರುಜನೆಯ ಆತಂಕ ಎದುರಿಸುತ್ತಿದ್ದಾರೆ.
ತ್ಯಾಜ್ಯದ ಗುಂಡಿ ಸುತ್ತ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಶಾಲೆಗೆ ಹೋಗಿ ಬರುವ ಮಕ್ಕಳನ್ನು ಗುರಿಯಾಗಿರಿಸಿಕೊಂಡು ನಾಯಿಗಳು ರಂಪಾಟ ನಡೆಸುತ್ತಿದೆ. ಇದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಜನ ಹೆದರುತ್ತಿದ್ದಾರೆ. ಮಕ್ಕಳ ಆರೋಗ್ಯ ಹಾಗೂ ಶೈಕ್ಷಣಿಕ ವಲಯಕ್ಕೆ ಆದ್ಯತೆಕೊಡಬೇಕಿದ್ದ ಗ್ರಾಮ ಪಂಚಾಯತ ಅಧಿಕಾರಿಯೇ ಇಲ್ಲಿ ಸಮಸ್ಯೆ ಮಾಡಿದ್ದರಿಂದ ಜನರ ಆಕ್ರೋಶವೂ ಹೆಚ್ಚಾಗಿದೆ. `ಇದು ಹಸಿ ಕಸ ಎಸೆಯುವ ಜಾಗವಲ್ಲ. ಒಣ ಕಸ ಮಾತ್ರ ಸಂಗ್ರಹಿಸಲಾಗುತ್ತದೆ’ ಎಂಬುದು ಗ್ರಾಮ ಪಂಚಾಯತ ಸದಸ್ಯ ದಾವೂದ ಹಾಗೂ ಸಯ್ಯದ್ ಅವರ ಮಾತು. `ಮೀನು ಹಾಗೂ ಮಾಂಸಗಳು ಒಣಕಸವೇ?’ ಎಂದು ಪ್ರಶ್ನಿಸಿದರೆ ಅವರಲ್ಲಿಯೂ ಉತ್ತರವಿಲ್ಲ.
`ಶಾಲೆ ಪಕ್ಕ ನಿರ್ಮಿಸಿದ ತ್ಯಾಜ್ಯದ ಗುಂಡಿಯನ್ನು ಕೂಡಲೇ ಸ್ಥಳಾಂತರಿಸಬೇಕು’ ಎಂದು ಜನಸಾಮಾನ್ಯರ ಸಮಾಜಕಲ್ಯಾಣ ಕೇಂದ್ರ ಆಗ್ರಹಿಸಿದೆ. ಈ ಬಗ್ಗೆ ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಪತ್ರ ಬರೆದಿದ್ದಾರೆ. `ಸಮಸ್ಯೆ ಬಗೆಹರಿಯದಿದ್ದರೆ ಹೋರಾಟ ನಿಶ್ಚಿತ’ ಎಂದು ಆ ಭಾಗದ ಶಂಕರ್ ಗೌಡ, ಸಂದೀಪ್ ಗೌಡ, ಅನಿತಾ, ಪಾರ್ವತಿ, ಹೇಮಾ ಗಣಪತಿ, ನಸರತ್ ಹಾಗೂ ಸಾಮಾಜಿಕ ಕಾರ್ಯಕರ್ತ ಸುಧಾಕರ್ ನಾಯ್ಕ ಎಚ್ಚರಿಸಿದ್ದಾರೆ.
Discussion about this post