ಕರ್ನಾಟಕದಿಂದ ಗೋವಾಗೆ ಅಕ್ರಮವಾಗಿ ಜಾನುವಾರು ಸಾಗಾಟ ನಡೆಯುತ್ತಿದೆ. ಅನೇಕ ತಪಾಸಣಾ ಕೇಂದ್ರಗಳಿದ್ದರೂ ಅಲ್ಲಿನವರ ಕಣ್ತಪ್ಪಿಸಿ ಹಸು-ಎಮ್ಮೆಗಳನ್ನು ಸಾಗಿಸಲಾಗುತ್ತಿದೆ.
ಮೊನ್ನೆ ಅಕ್ರಮ ಜಾನುವಾರು ಸಾಗಾಟಗಾರರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಎಮ್ಮೆಯೊಂದು ವಾಹನದಿಂದ ಕೆಳಗೆ ಬಿದ್ದು ಸಾವನಪ್ಪಿದೆ. ಜೊಯಿಡಾದ ರಾಮನಗರ-ಆನಮೋಡದ ಬಳಿ ಎಮ್ಮೆಯ ದೇಹ ಸಿಕ್ಕಿದೆ. ಆನಮೋಡ, ಜಳಕಟ್ಟಿ ಭಾಗದಲ್ಲಿ ಪ್ರಾಣಿಗಳ ಕಳೆಬರಹ ಸಿಗುತ್ತಿರುವುದು ಇದೇ ಮೊದಲಲ್ಲ.
ಬೆಳಗಾವಿ ಭಾಗದ ಜಾನುವಾರುಗಳನ್ನು ಕೆಲವರು ಕದ್ದು ಗೋವಾಗೆ ಸಾಗಿಸುತ್ತಿದ್ದಾರೆ. ಬೀಡಾಡಿ ದನಗಳನ್ನು ಸಹ ಕೊಂಡೊಯ್ದು ವಧೆ ಮಾಡಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈಚೆಗೆ ಜಾನುವಾರು ಕಳ್ಳತನ, ಜಾನುವಾರು ವಧೆ ಪ್ರಕರಣ ಹೆಚ್ಚಾಗಿದೆ. ಪೊಲೀಸರು ಕಠಿಣ ಕ್ರಮ ಜರುಗಿಸಿದರೂ ದುಷ್ಟರು ತಮ್ಮ ಬುದ್ದಿ ಬಿಟ್ಟಿಲ್ಲ.
ರಾಮನಗರ ಪೊಲೀಸ್ ಠಾಣೆಯ ಎಎಸ್‌ಐ ನಾಗಭೂಷಣ ಅವರು ಮೊನ್ನೆ ತಪಾಸಣಾ ಕೇಂದ್ರದ ಕರ್ತವ್ಯದಲ್ಲಿದ್ದರು. ಕರ್ತವ್ಯ ಮುಗಿಸಿ ಮರಳುವಾಗ ಅವರು ರಸ್ತೆ ಅಂಚಿನಲ್ಲಿ ಎಮ್ಮೆ ಬಿದ್ದಿರುವುದನ್ನು ನೋಡಿದರು. ಅದರ ಕುತ್ತಿಗೆಯಲ್ಲಿ ಬಿಗಿಯಾಗಿ ಹಗ್ಗ ಕಟ್ಟಲಾಗಿದ್ದು, ವಾಹನ ಚಾಲಕ ಹಿಂಸಾತ್ಮಕವಾಗಿ ಅದನ್ನು ಸಾಗಿಸುತ್ತಿರುವುದು ದೃಢವಾಯಿತು. ಪೊಲೀಸರನ್ನು ಯಾಮಾರಿಸಿ ಆತ ಪರಾರಿಯಾಗಿದನ್ನು ಖಚಿತಪಡಿಸಿಕೊಂಡ ಅವರು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದರು.
ಆದರೆ, ಅಷ್ಟರೊಳಗೆ ಆ ವಾಹನ ಗೋವಾ ಗಡಿ ದಾಡಿತ್ತು. ಹೀಗಾಗಿ ಆ ವಾಹನ ಹಿಡಿಯಲು ಆಗಲಿಲ್ಲ. ಎಮ್ಮೆಯ ಮಾಲಕರ ಹುಡುಕಾಟ ನಡೆಸಿದ ಪೊಲೀಸರಿಗೆ ಯಾವ ಹೈನುಗಾರರು ಸಿಗಲಿಲ್ಲ. ಇದರಿಂದ ಆ ಎಮ್ಮೆಯನ್ನು ಕಳ್ಳತನದ ದಾರಿಯಲ್ಲಿ ತಂದಿರುವುದು ಗೊತ್ತಾಯಿತು. ಹೀಗಾಗಿ ಎಮ್ಮೆ ಸಾಗಾಟ ನಡೆಸಿದ ಅಪರಿಚಿತ ವಾಹನ ಸವಾರನ ವಿರುದ್ಧ ಅವರು ಪ್ರಕರಣ ದಾಖಲಿಸಿಕೊಂಡರು.
ಸದ್ಯ ತಪಾಸಣಾ ಕೇಂದ್ರದಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಯುತ್ತಿದೆ. ಅದಾಗಿಯೂ ದುಷ್ಟರು ಅಡ್ಡದಾರಿ ಮೂಲಕ ಕಳ್ಳ ಸಾಗಾಣಿಕೆ ಮುಂದುವರೆಸಿದ್ದಾರೆ.
Discussion about this post