ಶಿಕ್ಷಣ, ಆರೋಗ್ಯ ಸೇರಿ ಇನ್ನಿತರ ಮೂಲಭೂತ ಸೌಕರ್ಯದಿಂದ ಸಮಸ್ಯೆ ಅನುಭವಿಸುತ್ತಿರುವವರಿಗೆ ಯಲ್ಲಾಪುರದ ಮದನೂರು ಗ್ರಾ ಪಂ ಅಧ್ಯಕ್ಷ ವಿಠ್ಠು ಶಳಕೆ ತುರ್ತು ನೆರವಿಗೆ ಬರುವ ಭರವಸೆ ನೀಡಿದ್ದಾರೆ. ಗ್ರಾಮ ಪಂಚಾಯದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಹಲವು ವಿಷಯಗಳ ಚರ್ಚೆ ನಂತರ ಅವರು `ಯಾವುದೇ ಸಮಸ್ಯೆಯಿದ್ದರೂ ತಮ್ಮ ಗಮನಕ್ಕೆ ತನ್ನಿ’ ಎಂದು ಸಾರ್ವಜನಿಕರಿಗೆ ಸೂಚಿಸಿದ್ದಾರೆ.
ಎರಡು ವಾರದ ಹಿಂದೆ ಮದನೂರಿನಲ್ಲಿ ಗ್ರಾಮಸಭೆ ನಡೆಯಬೇಕಿತ್ತು. ಅಧಿಕಾರಿಗಳ ಅನುಪಸ್ಥಿತಿ ಕಾರಣ ಜೂನ್ 30ಕ್ಕೆ ಗ್ರಾಮಸಭೆ ಆಯೋಜಿಸಲಾಗಿತ್ತು. ಅಧಿಕಾರಿಗಳ ಗೈರಿನ ಬಗ್ಗೆ ಗ್ರಾಮ ಆಡಳಿತ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಹೀಗಾಗಿ ಜೂನ್ 30ರ ಗ್ರಾಮಸಭೆಗೆ ಬಹುತೇಕ ಎಲ್ಲಾ ಇಲಾಖೆಯವರು ಹಾಜರಿದ್ದು, ಜನರ ಸಮಸ್ಯೆ ಆಲಿಸಿದರು.
ಮುಖ್ಯವಾಗಿ ವಸತಿ ಯೋಜನೆ, ಕೆರೆ ಅತಿಕ್ರಮಣ, ದಲಿತ ಸಮುದಾಯದವರಿಗೆ ಆದ ಅನ್ಯಾಯ, ಸ್ಮಶಾನ ಭೂಮಿ ಅಭಿವೃದ್ಧಿ, ಬಸ್ ಸೌಕರ್ಯದ ಕೊರತೆ, ಪಡಿತರ ಸಾಮಗ್ರಿ ವಿತರಣೆ ಸಮಸ್ಯೆ, ರಸ್ತೆ ಅಭಿವೃದ್ಧಿ ವಿಷಯವಾಗಿ ಚರ್ಚೆ ನಡೆಯಿತು. ಕೃಷಿ-ತೋಟಗಾರಿಕಾ ಇಲಾಖೆಯವರು ಆಗಮಿಸಿ ತಮ್ಮ ಇಲಾಖೆ ಚಟುವಟಿಕೆ ಹಾಗೂ ಸಬ್ಸಿಡಿ ವಿಷಯದ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಮಕ್ಕಳ ವಸತಿ ನಿಲಯ ಪ್ರವೇಶದ ಬಗ್ಗೆ ಹಿಂದುಳಿದ ವರ್ಗ ಹಾಗೂ ಸಮಾಜ ಕಲ್ಯಾಣ ಅಧಿಕಾರಿಗಳು ವಿವರಿಸಿದರು.
ಕಾಡು ಪ್ರಾಣಿ ಹಾವಳಿ ಹಾಗೂ ಪರಿಹಾರ ವಿತರಣೆ ಬಗ್ಗೆ ಸುದೀರ್ಘ ಚರ್ಚೆ ನಡೆದಿದ್ದು, ಅರಣ್ಯ ಇಲಾಖೆ ಕಾರ್ಯವೈಖರಿಯ ಬಗ್ಗೆ ಜನ ಅಸಮಧಾನವ್ಯಕ್ತಪಡಿಸಿದರು. ಅಕ್ರಮ ಮದ್ಯ ಮಾರಾಟದ ಬಗ್ಗೆ 112 ಸಹಾಯವಾಣಿಗೆ ಫೋನ್ ಮಾಡಿ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದರು. ಕಟ್ಟಡ ಕಾರ್ಮಿಕರ ಸಮಸ್ಯೆ ಹಾಗೂ ಹೆಸ್ಕಾಂ ಯೋಜನೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.
ಸಭೆಯ ಅಧ್ಯಕ್ಷತೆವಹಿಸಿದ್ದ ಮದನೂರು ಗ್ರಾ ಪಂ ಅಧ್ಯಕ್ಷ ವಿಠ್ಠು ಶಳಕೆ ಕೊನೆಗೆ ಜನತೆಗೆ ಭರವಸೆ ನೀಡಿದ್ದು, `ನಿಮ್ಮೊಂದಿಗೆ ನಾನಿದ್ದೇನೆ’ ಎಂಬ ವಿಶ್ವಾಸ ಮೂಡಿಸಿದರು. `ಗ್ರಾಮದ ಯಾವುದೇ ವ್ಯಕ್ತಿಗೆ ಯಾವುದೇ ಬಗೆಯ ಸಮಸ್ಯೆಯಾದರೂ ಗ್ರಾಮ ಪಂಚಾಯತ ತಂಡ ನೆರವಿಗೆ ಧಾವಿಸಲು ಸಿದ್ಧವಿದೆ’ ಎಂದು ಅವರು ಸಭೆಯಲ್ಲಿ ತಿಳಿಸಿದರು.
Discussion about this post