ಧಾರಾಕಾರ ಮಳೆಯಿಂದ ತತ್ತರಿಸಿದ ವನ್ಯಜೀವಿಗಳು ಇದೀಗ ಮಾನವ ನಿರ್ಮಿತ ಕಟ್ಟಡಗಳಲ್ಲಿ ಆಶ್ರಯಪಡೆಯಲು ಆಸಕ್ತಿವಹಿಸಿವೆ. ಕಳೆದ ವಾರ ಇಂಥಹ ಮೂರು ಪ್ರಕರಣ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಅಂಕೋಲಾದ ವಾಸರ ಗುದ್ರಿಗೆ ಬಳಿ ನಿರ್ಮಾಣ ಹಂತದಲ್ಲಿನ ಕಟ್ಟಡದಲ್ಲಿ ಆಶ್ರಯಪಡೆದಿದ್ದ ಚಿರತೆ ಯುವಕನ ಮೇಲೆ ದಾಳಿ ನಡೆಸಿತ್ತು. ಅದರ ಬೆನ್ನಲ್ಲೆ ಜೊಯಿಡಾದಲ್ಲಿ ಕರಡಿಯೊಂದು ಬಸ್ ನಿಲ್ದಾಣದಲ್ಲಿ ಆಶ್ರಯಪಡೆದ ವಿಡಿಯೋ ವೈರಲ್ ಆಗಿದೆ. ಇದರೊಂದಿಗೆ ಅದೇ ಬಸ್ ನಿಲ್ದಾಣದಲ್ಲಿ ಮತ್ತೊಂದು ಚಿರತೆ ರಾತ್ರಿ ತಂಗಿರುವುದು ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿದೆ.
ಜೋಯಿಡಾ ತಾಲೂಕಿನ ಗಣೇಶಗುಡಿಯ ಅವೆಡ ರಸ್ತೆಯಲ್ಲಿರುವ ಬಸ್ ನಿಲ್ದಾಣ ಕಾಡು ಪ್ರಾಣಿಗಳ ತಾಣವಾಗಿದೆ. ರಾತ್ರಿ 10 ಗಂಟೆ ವೇಳೆಗೆ ಈ ಭಾಗಕ್ಕೆ ವನ್ಯಜೀವಿಗಳ ಪ್ರವೇಶವಾಗುತ್ತಿದ್ದು, ಆ ವೇಳೆ ಮಳೆ ಬಂದರೆ ಅವು ಬಸ್ ನಿಲ್ದಾಣದೊಳಗೆ ಪ್ರವೇಶಿಸುವುದು ಸಾಮಾನ್ಯವಾಗಿದೆ.
ಕಾಡಿನ ಪ್ರಾಣಿಗಳು ನಾಡಿಗೆ ಬರುವುದು ಹೊಸತಲ್ಲ. ಆದರೆ, ಅವು ಮಾನವ ನಿರ್ಮಿತ ಕಟ್ಟಡದಲ್ಲಿ ಆಶ್ರಯಪಡೆಯುತ್ತಿರುವುದು ಜನರಿಗೆ ಹೊಸತು. ಬಸ್ ನಿಲ್ದಾಣದಲ್ಲಿ ಆಶ್ರಯಪಡೆಯುವ ಜೀವಿಗಳನ್ನು ಮತ್ತೆ ಅರಣ್ಯಕ್ಕೆ ಕಳುಹಿಸುವುದು ಅರಣ್ಯ ಇಲಾಖೆಗೂ ಸವಾಲಾಗಿದೆ. ಜೊಯಿಡಾದಲ್ಲಿ ಬಸ್ ನಿಲ್ದಾಣದಲ್ಲಿ ಆಶ್ರಯಪಡೆದ ವನ್ಯಜೀವಿಗಳಿಂದ ಮಾನವನ ಜೀವಕ್ಕೆ ಹಾನಿಯಾಗದ ಕಾರಣ ಜನರು ನಿರಾಳರಾಗಿದ್ದಾರೆ.
ಬಸ್ ನಿಲ್ದಾಣದಲ್ಲಿ ವನ್ಯಜೀವಿ ಆಶ್ರಯಪಡೆದ ವಿಡಿಯೋ ಇಲ್ಲಿ ನೋಡಿ..
Discussion about this post