ಎದುರಾಳಿ ಕಾಂಗ್ರೆಸ್ ಪಕ್ಷವನ್ನು ಹಣೆಯಲು ಬಿಜೆಪಿ ಪ್ರತಿಭಟನೆಯನ್ನು ಅಸ್ತ್ರವನ್ನಾಗಿಸಿಕೊಂಡಿದೆ. ಪ್ರತಿ ಗ್ರಾಮ ಪಂಚಾಯತ ಮಟ್ಟದಲ್ಲಿ ಜನರನ್ನು ಸೇರಿಸಿ ಪ್ರತಿಭಟಿಸುವ ಮೂಲಕ ಬಿಜೆಪಿ ಸಂಘಟನೆ ಮಾಡುತ್ತಿದೆ.
ಪ್ರತಿಭಟನೆ ವೇಳೆ ಬಿಜೆಪಿ ಕಾರ್ಯಕರ್ತರು ಕೇಂದ್ರ ಸರ್ಕಾರದ ಸಾಧನೆಯ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರದ ನೀತಿಗಳನ್ನು ಖಂಡಿಸುತ್ತಿದ್ದಾರೆ. ಪಂಚಾಯತ ಮಟ್ಟದಲ್ಲಿ ಆದ ಅಭಿವೃದ್ಧಿ ಕೆಲಸಗಳ ಬಗ್ಗೆ ವಿವರವಾಗಿ ಭಾಷಣ ಮಾಡುತ್ತಿದ್ದಾರೆ.
ಪ್ರತಿಭಟನೆ ನಡೆಯುವ ಅಕ್ಕ-ಪಕ್ಕದ ಗ್ರಾಮ ಪಂಚಾಯತಗಳಲ್ಲಿ ಬಿಜೆಪಿ ಬೆಂಬಲಿತ ಆಡಳಿತವಿದ್ದರೆ ಅಲ್ಲಿ ನಡೆದ ಅಭಿವೃದ್ಧಿ ಕೆಲಸಗಳ ಬಗ್ಗೆಯೂ ನಾಯಕರು ಮಾತನಾಡುತ್ತಿದ್ದಾರೆ. ಬಿಜೆಪಿ ಬೆಂಬಲಿತ ಅಧ್ಯಕ್ಷರಿರುವ ಕ್ಷೇತ್ರದಲ್ಲಿನ ಅಭಿವೃದ್ಧಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರಿರುವ ಪಂಚಾಯತದಲ್ಲಿನ ನ್ಯೂನ್ಯತೆಗಳನ್ನು ಸವಿಸ್ತಾರವಾಗಿ ಜನರ ಮುಂದಿಡುತ್ತಿದ್ದಾರೆ.
ಸದ್ಯ ಗ್ರಾಮ ಪಂಚಾಯತ ಮಟ್ಟದಲ್ಲಿ ಜನಾಕ್ರೋಶ ಯಾತ್ರೆ ನಡೆಸುತ್ತಿರುವುದರಿಂದ ಬಿಜೆಪಿಗೆ ದೊಡ್ಡ ಮಟ್ಟದ ಖರ್ಚು-ವೆಚ್ಚಗಳಿಲ್ಲ. ಜನಾಕ್ರೋಶ ಯಾತ್ರೆಯ ಮೂಲಕ ರಾಜ್ಯ ಸರ್ಕಾರದ ವೈಪಲ್ಯಗಳನ್ನು ಜನರಿಗೆ ಮುಟ್ಟಿಸುತ್ತಿರುವುದು ಸ್ಥಳೀಯ ಕಾಂಗ್ರೆಸ್ಸಿಗರ ಪಾಲಿಗೆ ನುಂಗಲಾರದ ತುತ್ತಾಗಿದೆ. ಇದರಿಂದ ಕಾಂಗ್ರೆಸ್ಸಿನ ಶಕ್ತಿ ಕುಂದಿದ್ದು, ಬಿಜೆಪಿ ಸಂಘಟನೆಗೆ ಇದುವೇ ದೊಡ್ಡ ವರದಾನವಾಗಿದೆ.
ವಸತಿ ಯೋಜನೆ, ಅಲ್ಪ ಸಂಖ್ಯಾತರ ಓಲೈಕೆ, ವೈದ್ಯರ ವರ್ಗಾವಣೆ ಬಿಜೆಪಿಗರ ಮುಖ್ಯ ಭಾಷಣದ ವಿಷಯ. ಪರಿಸ್ಥಿತಿಗೆ ಅನುಗುಣವಾಗಿ ಭ್ರಷ್ಟಾಚಾರ, ಸ್ಥಳೀಯ ಶಾಸಕರ ನಡೆ, ಗ್ರಾ ಪಂ ಅವ್ಯವಸ್ಥೆ, ಮೂಲಭೂತ ಸೌಕರ್ಯ ಕೊರತೆಯ ಬಗ್ಗೆಯೂ ಮಾತನಾಡುತ್ತಿದ್ದಾರೆ.
Discussion about this post