ಕಳೆದ ಬಾರಿ 6 ಸಾವಿರ ಪ್ರಕರಣಗಳನ್ನು ಒಂದೇ ದಿನದ ಲೋಕ ಅದಾಲತ್ ಮುಕ್ತಾಯಗೊಳಿಸಿದ್ದ ನ್ಯಾಯಾಧೀಶರು ಈ ಬಾರಿ 9 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಕೊನೆಗಾಣಿಸುವ ಸಿದ್ಧತೆ ಮಾಡಿಕೊಂಡಿದ್ದಾರೆ. ಜುಲೈ 12ರಂದು ಅನೇಕ ಪ್ರಕರಣಗಳನ್ನು ರಾಜಿ ಸಂದಾನದ ಮೂಲಕ ಮುಗಿಸುವುದಕ್ಕೆ ನ್ಯಾಯಾಲಯವೇ ಆಸಕ್ತಿವಹಿಸಿದೆ.
ಸಣ್ಣಪುಟ್ಟ ಹೊಡೆದಾಟ, ಜಗಳ, ಬ್ಯಾಂಕ್ ಪ್ರಕರಣಗಳನ್ನು ರಾಜಿ ಸೂತ್ರದ ಮೂಲಕ ಬಗೆಹರಿಸಲು ಈಗಾಗಲೇ ವಕೀಲರಿಗೆ ನ್ಯಾಯಾಲಯ ಸೂಚನೆ ನೀಡಿದೆ. ಅದರ ಪ್ರಕಾರ ಕಕ್ಷಿದಾರರಿಗೆ ಸಹ ವಕೀಲರು ಸಂದಾನ ಸೂತ್ರದ ಪಾಠ ಮಾಡಿದ್ದಾರೆ. ಕಾರವಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ ಎಂ ಈ ಬಗ್ಗೆ ಮಾಹಿತಿ ನೀಡಿದರು.
`ವಿವಿಧ ಹಂತದ ನ್ಯಾಯಾಲಯಗಳಲ್ಲಿ 39,270 ಪ್ರಕರಣಗಳು ಬಾಕಿ ಇದ್ದು, ಇದರಲ್ಲಿ 9,000 ಪ್ರಕರಣಗಳನ್ನು ಪಕ್ಷಗಾರರಿಗೆ ಹೊರೆಯಾಗದಂತೆ ಶೀಘ್ರವಾಗಿ ಇತ್ಯರ್ಥ ಮಾಡುವ ಗುರಿ ಹೊಂದಲಾಗಿದೆ. ಕಳೆದ ಬಾರಿ ನಡೆದ ಲೋಕ್ ಅದಾಲತ್‌ನಲ್ಲಿ 6,111 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿತ್ತು’ ಎಂದವರು ವಿವರಿಸಿದರು. ರಾಜ್ಯ ಮಟ್ಟದಲ್ಲಿ ಹಾಗೂ ವಲಯ ಮಟ್ಟದಲ್ಲಿ ಲೋಕ್ ಅದಾಲತ್ ಕುರಿತು ಸಭೆಗಳನ್ನು ನಡೆಸಲಾಗಿದ್ದು, ಪ್ರಕರಣಗಳನ್ನು ಶೀಘ್ರ ಇತ್ಯರ್ಥಕ್ಕೆ ಸಹಕರಿಸುವಂತೆ ಬ್ಯಾಂಕ್ ಮತ್ತು ವಿಮಾ ಕಂಪನಿಗಳಿಗೆ ಮಾಹಿತಿ ನೀಡಲಾಗಿದೆ’ ಎಂದವರು ಹೇಳಿದರು.
`90 ದಿನಗಳ ಕಾಲ ಮೀಡಿಯೇಶನ್ ಡ್ರೆವ್ ಅಭಿಯಾನ ನಡೆಯುತ್ತಿದ್ದು, ಸಂಧಾನದ ಮುಖಾಂತರ ಹೆಚ್ಚು ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಸಾರ್ವಜನಿಕರು ಲೋಕ್ ಅದಾಲತಿನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ ರಾಜಿಯಾಗಬಲ್ಲ ಪ್ರಕರಣಗಳನ್ನು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಬಗೆಹರಿಸಿಕೊಳ್ಳುವ ಮೂಲಕ ಪ್ರಯೋಜನಪಡೆಯಬೇಕು’ ಎಂದು ಕರೆ ನೀಡಿದರು.
`ರಾಷ್ಟಿಯ ಕಾನೂನು ಸೇವಾ ಪ್ರಾಧಿಕಾರದಿಂದ ಸಾಥಿ ಎಂಬ ಅಭಿಯಾನ ನಡೆಸಲಾಗುತ್ತಿದ್ದು, ಪರಿತ್ಯಕ್ತ ಮಕ್ಕಳಿಗೆ ಗುರುತಿನ ಚೀಟಿ ಹಾಗೂ ಆಧಾರ ಒದಗಿಸುವ ಕಾರ್ಯ ನಡೆಸಲಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಸರ್ವೆ ಕಾರ್ಯ ನಡೆದಿದೆ. ಯಾವುದೇ ಮಗುವು ಗುರುತಿಲ್ಲದೆ ಉಳಿಯಬಾರದು’ ಎಂದವರು ಹೇಳಿದರು.
Discussion about this post