ಪತ್ರ ಸ್ವೀಕರಿಸಿದ 15 ದಿನದ ಒಳಗೆ ಆ ಪತ್ರಕ್ಕೆ ಸೂಕ್ತ ಹಿಂಬರಹ ನೀಡಬೇಕು ಎಂಬುದು ಸರ್ಕಾರಿ ನಿಯಮ. ಆದರೆ, ಅರಣ್ಯ ಅತಿಕ್ರಮಣದಾರರ ವಿಷಯದಲ್ಲಿ ನ್ಯಾಯವಾದಿ ರವೀಂದ್ರ ನಾಯ್ಕ ಅವರು ಹೊನ್ನಾವರ ಅರಣ್ಯಾಧಿಕಾರಿಗಳಿಗೆ ಪತ್ರ ನೀಡಿ ತಿಂಗಳು ಕಳೆದರೂ ಆ ಪತ್ರಕ್ಕೆ ಸರಿಯಾದ ಉತ್ತರ ಬಂದಿಲ್ಲ!
ಅರಣ್ಯವಾಸಿಗಳ ಸಾಗುವಳಿ ಭೂಮಿ ಹಾಗೂ ಅರಣ್ಯ ಸಿಬ್ಬಂದಿ ವರ್ತನೆ ಬಗ್ಗೆ ನ್ಯಾಯವಾದಿ ರವೀಂದ್ರ ನಾಯ್ಕ ಅವರು ಮೇ 26ರಂದು ಪತ್ರ ಬರೆದಿದ್ದರು. ಪ್ರಮುಖ 5 ವಿಷಯಗಳ ಸ್ಪಷ್ಠನೆ ಕೋರಿ ಅವರು ಅರಣ್ಯಾಧಿಕಾರಿಗಳಿಗೆ ಪತ್ರ ನೀಡಿದ್ದರು. ಆದರೆ, ಆ ಪತ್ರಕ್ಕೆ ಅರಣ್ಯಾಧಿಕಾರಿಗಳು ಸೂಕ್ತ ಉತ್ತರ ನೀಡಿಲ್ಲ.
ಐದು ವಿಷಯಗಳ ಪೈಕಿ ಮೂರು ವಿಷಯಗಳಿಗೆ `ಕ್ರಮ ಜರುಗಿಸಲಾಗುವುದು’ ಎಂಬ ಹಿಂಬರಹ ನೀಡಲಾಗಿದೆ. ಅದರಲ್ಲಿ ಮೊದಲನೆಯದಾಗಿ ಅರಣ್ಯ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸಲು ಕಾನೂನಿನಲ್ಲಿ ಅವಕಾಶವಿದೆಯಾ? ಎಂದು ರವೀಂದ್ರ ನಾಯ್ಕ ಅವರು ಪ್ರಶ್ನಿಸಿದ್ದರು. ಇದಕ್ಕೆ `ನಿಯಮಾನುಸಾರ ಕ್ರಮ ಜರುಗಿಸಲಾಗುವುದು’ ಎಂದು ಇಲಾಖೆ ಉತ್ತರಿಸಿದೆ. ಅರಣ್ಯ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವ ಮುನ್ನ 64ಎ ಪ್ರಕ್ರಿಯೆ ಅಗತ್ಯವೇ? ಎಂದು ಅವರು ಪ್ರಶ್ನಿಸಿದ್ದರು. ಇದಕ್ಕೆ ಸಹ ಅರಣ್ಯ ಇಲಾಖೆ `ಕ್ರಮ ಜರುಗಿಸಲಾಗುವುದು’ ಎಂಬ ಸಿದ್ಧ ಉತ್ತರ ನೀಡಿದೆ!
ಅರಣ್ಯವಾಸಿಗಳ ಮೂಲಸೌಲಭ್ಯದ ಬಗ್ಗೆ ಕೇಳಿದ ಪ್ರಶ್ನೆಗೆ `ಮೇಲಧಿಕಾರಿಗಳಿಂದ ಉತ್ತರಪಡೆಯಬಹುದು’ ಎಂದು ಹೊನ್ನಾವರ ವಲಯ ಅರಣ್ಯಾಧಿಕಾರಿ ಲಿಖಿತವಾಗಿ ತಿಳಿಸಿದ್ದು, ಆ ಮೇಲಧಿಕಾರಿಗಳ ವಿವರ ನೀಡಿಲ್ಲ. ಅರಣ್ಯವಾಸಿಗಳ ದೈಹಿಕ ಹಿಂಸೆ, ನಿಂದನೆಗೆ ಅವಕಾಶವಿದೆಯೇ? ಎಂದು ಕೇಳಲಾದ ಪ್ರಶ್ನೆಗೆ `ಈ ಪ್ರಶ್ನೆ ಅರಣ್ಯ ಕಾಯ್ದೆಗೆ ಸಂಬAಧಿಸಿಲ್ಲ’ ಎಂದು ಉತ್ತರಿಸಿದೆ.
ಅರಣ್ಯ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವ ವಿಷಯವಾಗಿ ಕೇಳಿದ ಪ್ರಶ್ನೆಗೆ ಸಹ `ಮಾಹಿತಿಪಡೆದು ಕ್ರಮ ಜರುಗಿಸಲಾಗುವುದು’ ಎಂದು ಅರಣ್ಯ ಇಲಾಖೆ ಉತ್ತರ ನೀಡಿದೆ. ಕಾನೂನಾತ್ಮಕ ಅಂಶಗಳ ಉತ್ತರಿಸದೇ ಅಸ್ಪಷ್ಟ ಉತ್ತರ ನೀಡಿದ ಅರಣ್ಯ ಅಧಿಕಾರಿ ನಡೆಯ ವಿರುದ್ಧ ಅರಣ್ಯ ಅತಿಕ್ರಮಣದಾರರು ಆಕ್ರೋಶವ್ಯಕ್ತಪಡಿಸಿದ್ದಾರೆ.
Discussion about this post