ದೇಶದಲ್ಲಿ ಸುಮಾರು ಎಂಟು ಕೋಟಿ ರೈತರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಆದರೆ, ಈಗ ಈ ಯೋಜನೆಯ ಹೆಸರಿನಲ್ಲಿ ನಕಲಿ ಮೊಬೈಲ್ ಆ್ಯಪ್ ಲಿಂಕ್ ಹರಿದಾಡುತ್ತಿದ್ದು, ಆ ಆಫ್ ಬಳಸಿದರೆ ಬ್ಯಾಂಕ್ ಖಾತೆಯ ಹಣ ಮಾಯವಾಗುವುದು ಖಚಿತ!
ಕೆಲ ದಿನಗಳಿಂದ ಹಲವು ವಾಟ್ಸಪ್ ಗ್ರೂಪ್‌ಗಳಲ್ಲಿ `ಪಿಎಂ ಕಿಸಾನ್’ ಹೆಸರಿನ ಅಪ್ಲಿಕೇಶನ್ ಹೊಂದಿರುವ ಮೆಸೇಜ್ ಒಂದು ಹರಿದಾಡುತ್ತಿದ್ದು, ಕೃಷಿಕರಿಗೆ ಉಪಕಾರಿಯಾಗುವ ಅಪ್ಲಿಕೇಶನ್ ಎಂದು ನಂಬಿದರೆ ಮೋಸ ಹೋಗುವುದು ನಿಶ್ಚಿತ. ಯಲ್ಲಾಪುರ ತಾಲೂಕಿನ ಕಳಚೆಯ ಆರ್ ಪಿ ಹೆಗಡೆ ಅವರು ಇಂಥದೇ ಮೋಸದ ಜಾಲದಲ್ಲಿ ಸಿಲುಕಿದ್ದು, ಕೊನೆಯ ಕ್ಷಣದಲ್ಲಿ ಎಚ್ಚೆತ್ತು ಹಣಕಾಸಿನ ವಿಚಾರದಲ್ಲಾಗಬಹುದಾದ ನಷ್ಟದಿಂದ ತಪ್ಪಿಸಿಕೊಂಡಿದ್ದಾರೆ.
ಆರ್ ಪಿ ಹೆಗಡೆ ಅವರು ವಾಟ್ಸಪ್‌ನ ಸ್ಥಳೀಯ ಗ್ರೂಪ್ ಒಂದರಲ್ಲಿ ಸದಸ್ಯರಾಗಿದ್ದರು. ಅದೇ ಗುಂಪಿನಲ್ಲಿ ಇವರಂತೆಯೇ ನಂಬಿ ಮೋಸ ಹೋಗಿದ್ದ ಬೇರೊಂದು ಗುಂಪಿನ ಸದಸ್ಯರ ನಂಬರ್‌ನಿAದ ಇದೇ ಗ್ರೂಪ್‌ಗೆ `ಪಿಎಂ ಕಿಸಾನ್’ ಎಂಬ ಎಪಿಕೆ ಫೈಲ್ ಬಂದಿತ್ತು. ಇವರೂ ಕೂಡ ಇದು ಕೃಷಿಕರಿಗೆ ಉಪಯುಕ್ತವಾಗುವ ಅಪ್ಲಿಕೇಶನ್ ಎಂದು ನಂಬಿ ಕ್ಲಿಕ್ ಮಾಡಿ ಡೌನ್‌ಲೋಡ್ ಮಾಡಿಬಿಟ್ಟಿದ್ದರು. ಅಪ್ಲಿಕೇಶನ್ ಇನ್ಸಾ÷್ಟಲ್ ಆದಮೇಲೆ ಅಲ್ಲಿ ಕೇಳಿದ ಎಲ್ಲ ಮಾಹಿತಿಗಳನ್ನು ನೀಡುತ್ತ ಹೋದರು. ಕೊನೆಯಲ್ಲಿ ನಿಮ್ಮ ಬ್ಯಾಂಕ್ ಖಾತೆಯ ವಿವರ ನಮೂದಿಸಿ ಎಂದಾಗ ಆರ್ ಪಿ ಹೆಗಡೆಯವರಿಗೆ ಅನುಮಾನ ಮೂಡಿತ್ತು.
ಕ್ಷಣಮಾತ್ರದಲ್ಲಿ ವಾಟ್ಸಪ್ ಹ್ಯಾಕ್!
ಅನುಮಾನಗೊಂಡು ಅದಾಗಲೇ ಪ್ರತಿಷ್ಠಾಪಿಸಿದ್ದ ಅಪ್ಲಿಕೇಶನ್‌ನ್ನು ತೆಗೆದು ಹಾಕಿದರು. ಆದರೆ, ಹ್ಯಾಕರ್ ಅದಾಗಲೇ ರಿಮೋಟ್ ಆ್ಯಕ್ಸೆಸ್ ಟೂಲ್ ಮೂಲಕ ಆರ್ ಪಿ ಹೆಗಡೆಯವರ ವಾಟ್ಸಪ್‌ನ್ನು ತನಗೆ ಬೇಕಾದಂತೆ ಆಡಿಸತೊಡಗಿದ್ದರು. ಅವರ ಫೋನ್‌ಬುಕ್‌ನಲ್ಲಿರುವ ನಂಬರ್ ಅಷ್ಟೇ ಅಲ್ಲದೆ, ಅವರ ನಂಬರ್ ಇರುವ ಎಲ್ಲ ವಾಟ್ಸಪ್ ಗ್ರೂಪ್‌ಗಳಿಗೂ ಅವರದೇ ನಂಬರ್‌ನಿoದ ಮತ್ತದೇ ಪಿ ಎಂ ಕಿಸಾನ್ ಎಂಬ ನಕಲಿ ಎಪಿಕೆ ಫೈಲ್ ರವಾನೆಯಾಗಿತ್ತು. ತಕ್ಷಣ ಇಂಟರ್ನೆಟ್ ಸಂಪರ್ಕ ನಿಲ್ಲಿಸಿದ ಆರ್ ಪಿ ಹೆಗಡೆ ಅವರು ಫೋನ್ ರಿಸ್ಟೋರ್ ಮಾಡಿ, ವಾಟ್ಸಪ್ ರಿ-ಇನ್ಸ್ಸ್ಟಾಲ್ ಮಾಡಿದರು. ಆದರೆ, ಸಮಸ್ಯೆ ಅಲ್ಲಿಗೆ ಬಗೆಹರಿಯಲಿಲ್ಲ. ಕೊನೆಗೆ ಸಿಮ್ ಬ್ಲಾಕ್ ಮಾಡಿಸಿ, ಅದೇ ನಂಬರ್‌ಗೆ ಹೊಸ ಸಿಮ್ ಖರೀದಿಸಿ ಎರಡು ದಿನ ಬಿಟ್ಟು ಬಳಸಿದರು.
ರೈತರನ್ನೂ ಬಿಡದ ಫಿಶಿಂಗ್ ಜಾಲ
ಇಂತಹ ಫಿಶಿಂಗ್ ಅಪ್ಲಿಕೇಶನ್‌ಗಳು ಆಗಾಗ ಹೊಸ ಅಂಗಿ ತೊಟ್ಟು ಸೋಶಿಯಲ್ ಮೀಡಿಯಾಗಳಲ್ಲಿ ಇಣುಕುತ್ತಲೇ ಇರುತ್ತವೆ. ವರ್ಷದಿಂದೀಚೆಗೆ ಕೆನರಾ ಬ್ಯಾಂಕ್, ಎಸ್‌ಬಿಐ ಯೋನೊ ಇತ್ಯಾದಿಗಳ ಇ-ಕೆವೈಸಿ ನಕಲಿ ಅಪ್ಲಿಕೇಶನ್‌ಗಳೂ ಸಾಕಷ್ಟು ತಲೆನೋವು ತಂದಿದ್ದವು. ಅಲ್ಲದೆ, `ಮೋದಿ ಸರ್ಕಾರ ಪ್ರತಿಯೊಬ್ಬರಿಗೂ ಉಚಿತ ಇಂಟರ್ನೆಟ್ ನೀಡುತ್ತಿದೆ. ಹಬ್ಬದ ಕೊಡುಗೆಯಾಗಿ ಅಮೇಜಾನ್ ನಿಮಗಾಗಿ ಹೊಸ ಉಚಿತ ಆಫರ್ ತಂದಿದೆ’ ಇತ್ಯಾದಿ ಇತ್ಯಾದಿ ಬಲೆ ಬೀಸಿ ಮೋಸ ಹೋಗುವವರನ್ನು ಹುಡುಕುತ್ತಲೇ ಇರುತ್ತಾರೆ. ಅರೆಕ್ಷಣವೂ ಯೋಚಿಸದೆ ಅಲ್ಲಿರುವ ಎಪಿಕೆ ಫೈಲ್ ಕ್ಲಿಕ್ ಮಾಡಿಬಿಟ್ಟರೆ ಸಮಸ್ಯೆ ಶುರುವಾಯ್ತೆಂದೇ ಲೆಕ್ಕ.
`ಇದೀಗ ರೈತರ ಕಡೆ ದೃಷ್ಟಿ ಹಾಯಿಸಿರುವ ಸೈಬರ್ ಕ್ರಿಮಿಗಳು ಬೆಳೆ ದರ್ಶಕ್, ಪಿಎಂ ಕಿಸಾನ್ ಮುಂತಾದ ಹೆಸರಿನಲ್ಲಿ ನಕಲಿ ಅಪ್ಲಿಕೇಶನ್‌ಗಳನ್ನು ಹರಿಬಿಟ್ಟಿದ್ದಾರೆ. ನೀವಿರುವ ಗ್ರೂಪ್‌ಗಳಲ್ಲಿ ಇಂತಹ ಯಾವುದೇ ಹೆಸರಿನ ಎಪಿಕೆ ಫೈಲ್ ಕಾಣಿಸಿಕೊಂಡರೂ ಅದನ್ನು ಕ್ಲಿಕ್ ಮಾಡದಿರಿ. ಅವರು ಕೇಳಿದಂತೆ ಪ್ರತಿಯೊಂದು ವಿವರ, ಬ್ಯಾಂಕ್ ಖಾತೆಯ ಮಾಹಿತಿ ಕೊಟ್ಟರಂತೂ ಖಾತೆ ಖಾಲಿಯಾಗುವುದು ಪಕ್ಕಾ. ಇಂತಹ ಅಪ್ಲಿಕೇಶನ್‌ಗಳ ಅಗತ್ಯವಿದ್ದರೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಬ್ಲೂ ಟಿಕ್ ಇರುವ ಅಧಿಕೃತ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ ಬಳಸುವದೊಂದೇ ಸುರಕ್ಷಿತ ದಾರಿ’ ಎಂದು ಸೈಬರ್ ಅಪರಾಧದ ಬಗ್ಗೆ ನಿರಂತರ ಅರಿವು ಮೂಡಿಸುತ್ತಿರುವ ಮಾಗೋಡಿನ ಸತೀಶ್ ಭಟ್ಟ ಮಾಹಿತಿ ಹಂಚಿಕೊoಡರು.
Discussion about this post