ಖಾತೆಯಲ್ಲಿ ಹಣ ಇಲ್ಲದಿದ್ದರೂ ಚೆಕ್ ನೀಡಿ ಪರಾರಿಯಾಗಿದ್ದ ವ್ಯಕ್ತಿಗೆ ನ್ಯಾಯಾಲಯ 5 ತಿಂಗಳು ಜೈಲು ಶಿಕ್ಷೆ ವಿಧಿಸಿದೆ. ಭಟ್ಕಳದ ಕೆ ಎಂ ಶರೀಫ್ ಖಾದರ್ ಇದೀಗ ಕಾರವಾರ ಜೈಲು ಸೇರಿದ್ದಾರೆ.
ಭಟ್ಕಳದ ಗಣೇಶ ನಗರ ಪುರವರ್ಗದಲ್ಲಿ ಕೆ ಎಂ ಶರೀಫ್ ಖಾದರ್ ವಾಸವಾಗಿದ್ದರು. ಅವರು ವ್ಯವಹಾರದ ವಿಷಯವಾಗಿ ವ್ಯಕ್ತಿಯೊಬ್ಬರಿಗೆ 20 ಲಕ್ಷ ರೂ ಮೌಲ್ಯದ ಚೆಕ್ ನೀಡಿದ್ದರು. ಆದರೆ, ಕೆ ಎಂ ಶರೀಫ್ ಖಾದರ್ ಅವರ ಖಾತೆಯಲ್ಲಿ ಹಣವಿರಲಿಲ್ಲ. ಹೀಗಾಗಿ ಆ ಚೆಕ್ ಬೌನ್ಸ್ ಆಗಿತ್ತು.
ಹಣ ಬರಬೇಕಿದ್ದ ವ್ಯಕ್ತಿ ಸಾಕಷ್ಟು ಕಾಡಿ-ಬೇಡಿದರೂ ಕೆ ಎಂ ಶರೀಫ್ ಖಾದರ್ ಹಣ ಕೊಟ್ಟಿರಲಿಲ್ಲ. ಹೀಗಾಗಿ ಆ ವ್ಯಕ್ತಿ ನ್ಯಾಯಾಲಯದ ಮೊರೆ ಹೋಗಿದ್ದು, ಕೆ ಎಂ ಶರೀಫ್ ಖಾದರ್ ನ್ಯಾಯಾಲಯಕ್ಕೂ ಹಾಜರಾಗದೇ ತಪ್ಪಿಸಿಕೊಂಡಿದ್ದರು. 2016ರಲ್ಲಿಯೇ ನ್ಯಾಯಾಲಯ ಕೆ ಎಂ ಶರೀಫ್ ಖಾದರ್ ವಿರುದ್ಧ ವಾರೆಂಟ್ ಹೊರಡಿಸಿತ್ತು. ಅಲ್ಲಿ ಇಲ್ಲಿ ತಲೆಮರೆಸಿಕೊಂಡು ಓಡಾಡಿಕೊಂಡಿದ್ದ ಕೆ ಎಂ ಶರೀಫ್ ಖಾದರ್ ಮೊನ್ನೆ ಬೆಂಗಳೂರಿನಲ್ಲಿ ಸಿಕ್ಕಿ ಬಿದ್ದರು.
ಬೆಂಗಳೂರಿನ ಕಾವೇರಿ ಭವನದ ಬಳಿ ಅಡ್ಡಾಡುತ್ತಿದ್ದ ಕೆ ಎಂ ಶರೀಫ್ ಖಾದರ್ ಅವರನ್ನು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ರನ್ನಾ ಗೌಡ ಪಾಟೀಲ ಕಂಡುಹಿಡಿದರು. ಪೊಲೀಸ್ ಸಿಬ್ಬಂದಿ ಲೋಕೇಶ ನಾಯ್ಕ ಹಾಗೂ ವಿನೋದ ರೆಡ್ಡಿ ಸೇರಿ ಕೆ ಎಂ ಶರೀಫ್ ಖಾದರ್ ಅವರನ್ನು ಬಂಧಿಸಿದರು. ಅವರನ್ನು ಭಟ್ಕಳದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ 5ತಿಂಗಳ 17 ದಿನಗಳ ಕಾಲ ಜೈಲಿಗೆ ಕಳುಹಿಸಿತು.
ಸದ್ಯ ಕೆ ಎಂ ಶರೀಫ್ ಖಾದರ್ ಕಾರವಾರ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ. ತಲೆಮರೆಸಿಕೊಂಡ ಆರೋಪಿಯನ್ನು ಚಾಣಾಕ್ಷತನದಿಂದ ಬಂಧಿಸಿದ ಅಧೀನ ಪೊಲೀಸ್ ಅಧಿಕಾರಿ-ಸಿಬ್ಬಂದಿಯನ್ನು ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಶ್ಲಾಘಿಸಿದ್ದಾರೆ.
Discussion about this post