ಕಾರವಾರದ ಕದ್ರಾ-ಕೊಡಸಳ್ಳಿ ಭಾಗದ ಕಾಳಿ ನದಿ ಅಣೆಕಟ್ಟು ಪ್ರದೇಶದ ಅನತಿ ದೂರದಲ್ಲಿ ಗುರುವಾರ ನಸುಕಿನಲ್ಲಿ ಭಾರೀ ಪ್ರಮಾಣದ ಗುಡ್ಡ ಕುಸಿದಿದ್ದು, ಶುಕ್ರವಾರವೂ ಗುಡ್ಡ ಕುಸಿತ ಮುಂದುವರೆದಿದೆ. ಗುಡ್ಡ ಕುಸಿತದ ದೃಶ್ಯಾವಳಿಗಳು ಹೊರ ಬಿದ್ದಿವೆ.
ಕಾಳಿ ನದಿ ಪ್ರದೇಶದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಪರಿಣಾಮ ಮಳೆಯ ನೀರು ಅಣೆಕಟ್ಟಿನಲ್ಲಿ ಶೇಖರಣೆಯಾಗುತ್ತಿದ್ದು, ಅಕ್ಕ-ಪಕ್ಕದ ಗುಡ್ಡ ಬೆಟ್ಟಗಳು ತೇವಗೊಂಡಿದೆ. ಅದರ ಮುಂದುವರೆದ ಭಾಗವಾಗಿ ಗುಡ್ಡದ ಮಣ್ಣು ಸಡಿಲಗೊಂಡು ಕುಸಿತವಾದ ಬಗ್ಗೆ ವದಂತಿಗಳಿದ್ದರೂ ಈ ವಿಷಯ ಖಚಿತವಾಗಿಲ್ಲ. ಗುಡ್ಡ ಕುಸಿತದ ಕಾರಣಗಳ ಬಗ್ಗೆ ಇನ್ನೂ ಅಧ್ಯಯನ ಮುಂದುವರೆದಿದೆ. ಈ ನಡುವೆ ಮುನ್ನಚ್ಚರಿಕಾ ಕ್ರಮವಾಗಿ ಕದ್ರಾ ಅಣೆಕಟ್ಟಿನ ನಾಲ್ಕು ಗೇಟುಗಳಿಂದ ನೀರು ಹೊರಬಿಡಲಾಗಿದೆ.
ಗುರುವಾರ ಕದ್ರಾ – ಬಾಳೆಮನೆ ರಸ್ತೆ ಮೇಲೆ ಗುಡ್ಡ ಕುಸಿದಿದ್ದು, ಅದೇ ಪ್ರದೇಶದಲ್ಲಿ ಇನ್ನಷ್ಟು ಮಣ್ಣು ಧರೆಗೆ ಅಪ್ಪಳಿಸುತ್ತಿದೆ. ಕದ್ರಾ ಅಣೆಕಟ್ಟಿನ ಹಿನ್ನಿರಿಗೂ ಗುಡ್ಡದ ಮಣ್ಣು ಅಪ್ಪಳಿಸಿದೆ. ಕದ್ರಾ ಅಣೆಕಟ್ಟಿನಿಂದ 12ಕಿಮೀ ಹಾಗೂ ಕೊಡಸಳ್ಳಿ ಅಣೆಕಟ್ಟಿನಿಂದ 22ಕಿಮೀ ದೂರದಲ್ಲಿ ಈ ಗುಡ್ಡ ಕುಸಿತ ಉಂಟಾಗಿದೆ. ಮಣ್ಣಿನ ರಾಶಿಯನ್ನು ಪೂರ್ಣ ಪ್ರಮಾಣದಲ್ಲಿ ತೆರವು ಮಾಡುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ. ಜೊತೆಗೆ ಮಣ್ಣು ತೆಗೆದಷ್ಟು ಮತ್ತೆ ಭೂ ಕುಸಿತ ಸಾಧ್ಯತೆ ಹಿನ್ನಲೆ ಅಧ್ಯಯನ ವರದಿಗೆ ಕಾಯಲಾಗುತ್ತಿದೆ.
ಕಾಳಿ ನದಿ ಹಿನ್ನೀರು ಪ್ರದೇಶದಲ್ಲಿ ವ್ಯಾಪಕ ಪ್ರಮಾಣದ ಮರಗಳು ಬಿದ್ದಿವೆ. ಅಂದಾಜು 50 ಮೀಟರ್ ಗುಡ್ಡ ಕುಸಿತದ ಪರಿಣಾಮ ಹಿನ್ನೀರು ಆಳದಲ್ಲಿಯೂ ಹೂಳು ತುಂಬಿದೆ. ಬಾಳೆಮನೆ, ಜೋಯಿಡಾ ತಾಲೂಕಿನ ಸೂಳಗೇರಿ ಗ್ರಾಮದ ಜನರ ಸಂಚಾರಕ್ಕಿದ್ದ ರಸ್ತೆ ಸಂಪೂರ್ಣವಾಗಿ ಬಂದ್ ಆಗಿದೆ. ಗುಡ್ಡ ಕುಸಿತ ಕಾರಣ ಕೊಡಸಳ್ಳಿ ಅಣೆಕಟ್ಟೆ ನಿರ್ವಹಣೆ ಕೆಲಸಕ್ಕೆ ತೆರಳಬೇಕಿದ್ದ ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿ-ಸಿಬ್ಬಂದಿಗೂ ರಸ್ತೆ ಇಲ್ಲ. ಹೀಗಾಗಿ ಅಣೆಕಟ್ಟಿಗೆ ತೆರಳುವ ಸಿಬ್ಬಂದಿ ದೋಣಿಯ ಹುಡುಕಾಟದಲ್ಲಿದ್ದಾರೆ.
ಇನ್ನೂ ಜೊಯಿಡಾದ ಸೂಳಗೇರಿ ಗ್ರಾಮಕ್ಕೆ ಬುಧವಾರ ರಾತ್ರಿ ತೆರಳಿದ್ದ ಬಸ್ಸು ಮರಳಿ ಬಂದಿಲ್ಲ. ರಸ್ತೆ ಮೇಲೆ ಮಣ್ಣು ಬಿದ್ದಿರುವುದರಿಂದ ಬಸ್ಸನ್ನು ಆ ಕಡೆಯೇ ಸುರಕ್ಷಿತವಾಗಿರಿಸಿಕೊಳ್ಳಲಾಗಿದೆ.
ಕದ್ರಾ ಬಳಿ ಗುಡ್ಡ ಕುಸಿತದ ವಿಡಿಯೋ ಇಲ್ಲಿ ನೋಡಿ..
Discussion about this post