ಶಿರಸಿ ಬಸ್ ನಿಲ್ದಾಣಕ್ಕೆ ಗೋಡೆ ಗಡಿಯಾರ ದೇಣಿಗೆಯಾಗಿ ನೀಡಿದ ಲಯನ್ಸ್ ಕ್ಲಬ್ ಗಡಿಯಾರದ ಅಡಿಭಾಗ ಸಂಸ್ಥೆಯ ಹೆಸರನ್ನು ಅಚ್ಚೊತ್ತಿಕೊಂಡಿರುವುದರ ಜೊತೆ 24 ಜನರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದೆ . ಸಾವಿರ ರೂ ಆಸುಪಾಸಿನ ಗಡಿಯಾರ ಕೊಟ್ಟು 24 ಜನರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಪ್ರಚಾರಪಡೆದ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ!
ಮಾನವೀಯ ಸೇವೆಯ ಮೂಲಕ ಸಮಾಜದಲ್ಲಿ ಉತ್ತಮ ಬದಲಾವಣೆ ತರುವುದು ಲಯನ್ಸ ಕ್ಲಬ್ಬಿನ ಧ್ಯೆಯ. ನೇತ್ರದಾನ ವಿಷಯವಾಗಿ ಲಯನ್ಸ ಕ್ಲಬ್ ಸಾಕಷ್ಟು ಕೆಲಸ ಮಾಡಿದೆ. ಅದರಂತೆ ನಿತ್ಯ ಸಾವಿರಾರು ಜನ ಬಂದು ಹೋಗುವ ಶಿರಸಿ ಬಸ್ ನಿಲ್ದಾಣದಲ್ಲಿಯೂ ಲಯನ್ಸ ಕ್ಲಬ್ ನೇತ್ರದಾನದ ಸಂದೇಶ ಸಾರಿದೆ. ಬಸ್ ನಿಲ್ದಾಣಕ್ಕೆ ಅಗತ್ಯವಿರುವ ಗೋಡೆ ಗಡಿಯಾರವನ್ನು ಕೊಡುಗೆಯಾಗಿ ನೀಡಿದೆ.
ಗೋಡೆ ಗಡಿಯಾರ ಕೊಡುಗೆ ನೀಡಿದ ನಂತರ ಲಯನ್ಸ ಕ್ಲಬ್ ಸದಸ್ಯರ ಜೊತೆ ಫೋಟೋ ತೆಗೆಸಿಕೊಂಡಿದೆ. `ಸಾವಿರ ರೂ ವೆಚ್ಚ ಮಾಡಿದ ಗಡಿಯಾರ ಕೊಟ್ಟವರು ಅದರ ಫೋಟೋ ತೆಗೆಸಿ ಪ್ರಚಾರಪಡೆಯಲು ಎರಡು ಪಟ್ಟು ವೆಚ್ಚ ಮಾಡಿದ್ದಾರೆ’ ಎಂಬ ನಿಟ್ಟಿನಲ್ಲಿ ವಿಷಯ ಹರಿದಾಡುತ್ತಿದೆ. ಲಯನ್ಸ ಕ್ಲಬ್ಬಿನವರು ತಾವು `ದೊಡ್ಡ ಸಾಧನೆ ಮಾಡಿದ್ದೇವೆ’ ಎಂದು ತೋರಿಸಿಕೊಳ್ಳುವುದಕ್ಕಾಗಿ ಗೋಡೆ ಗಡಿಯಾರದ ಜೊತೆ ತೆಗಿಸಿಕೊಂಡ ಫೋಟೋವನ್ನು ಪತ್ರಿಕೆಯವರಿಗೆ ನೀಡಿದ್ದಾರೆ. ಆದರೆ, ಅವರ ಈ ಸಾಧನೆ ವಿಷಯ ಬಹುತೇಕ ಪತ್ರಿಕೆಯಲ್ಲಿ ಪ್ರಕಟವಾಗಿಲ್ಲ.
ಹೀಗಾಗಿ ಕ್ಲಬ್ಬಿನ ಸದಸ್ಯರೇ ಸಾಮಾಜಿಕ ಜಾಲತಾಣದಲ್ಲಿ ತಾವು ಮಾಡಿದ ಸಾಧನೆ ಬಗ್ಗೆ ಫೋಟೋ ಹರಿಬಿಟ್ಟಿದ್ದು, ಅದು ವೈರಲ್ ಆಗಿದೆ. ಜೊತೆಗೆ ಅಷ್ಟೇ ಪ್ರಮಾಣದ ಟೀಕೆಗೂ ಕಾರಣವಾಗಿದೆ. ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಎರಡು ಬಾಳೆಹಣ್ಣು ಕೊಟ್ಟು ಐದಾರು ಜನ ಫೋಟೋ ತೆಗೆಸಿಕೊಳ್ಳುತ್ತಿರುವುದು ಈಚೆಗೆ ಟೀಕೆಗೆ ಒಳಗಾಗಿದ್ದು, ಅದರ ಬೆನ್ನಿಗೆ ಲಯನ್ಸ ಕ್ಲಬ್ ಕಾರ್ಯವೂ ಟೀಕಾಕಾರರಿಗೆ ಆಹಾರವಾಗಿದೆ.
Discussion about this post