ಅOಕೋಲಾದಲ್ಲಿ ವಾಣಿಜ್ಯ ಬಂದರು ನಿರ್ಮಾಣ ಗುತ್ತಿಗೆಪಡೆದ JSW ಕಂಪನಿ ಹೆದ್ದಾರಿಯ ಮೇಲೆ ಹುಬ್ಬಳ್ಳಿ-ಅಂಕೋಲಾ ರೈಲು ಓಡಿಸಿದೆ. ಬಂದರು ವಿಷಯವಾಗಿ ಜನರಿಗೆ ವಿಷಯ ಮುಟ್ಟಿಸುವ ತರಾತುರಿಯಲ್ಲಿ ರೈಲ್ವೆ ಹಳಿ ಬಾರದ ಕ್ಷೇತ್ರಗಳ ಮೇಲೆಯೂ ರೈಲು ಓಡಿಸಿದ ವಿಡಿಯೋ ಮಾಡಿ ಹರಿಬಿಟ್ಟಿದೆ!
ಹುಬ್ಬಳ್ಳಿ ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಹಾಗೂ ಆ ಭಾಗದ ರಾಜ್ಯ ಹೆದ್ದಾರಿ ಅಂಚಿನಲ್ಲಿ ಅನೇಕರು ಬದುಕು ಕಟ್ಟಿಕೊಂಡಿದ್ದಾರೆ. ವ್ಯಾಪಾರ, ವಸತಿ, ಕೃಷಿ, ಹೈನುಗಾರಿಕೆ ಮಾಡಿಕೊಂಡು ಜನ ಅಲ್ಲಿ ಬದುಕುತ್ತಿದ್ದಾರೆ. JSW ಕಂಪನಿ ಹೆದ್ದಾರಿ ಹಾಗೂ ಹೆದ್ದಾರಿ ಅಂಚಿನ ಭೂಮಿಯಲ್ಲಿ ರೈಲು ಓಡಿಸಿದ್ದು, ಕಂಪನಿ ಓಡಿಸಿದ ಈ ರೈಲು ಕಿರವತ್ತಿ ಪೇಟೆಗೆ ನುಗ್ಗಿದೆ. ಅದಾದ ಮೇಲೆ ಯಲ್ಲಾಪುರ ಪಟ್ಟಣಕ್ಕೆ ತಾಗಿಕೊಂಡು ರೈಲು ಹೋಗಿದೆ. ನಂತರ ಇಡಗುಂದಿ-ಅರಬೈಲು ಪೇಟೆಯಲ್ಲಿಯೂ ರೈಲು ಜೋರಾಗಿ ಸಂಚರಿಸಿದೆ. ಅದಾದ ನಂತರ ಆ ರೈಲು ಅಂಕೋಲಾ ತಲುಪಿದ ಬಗ್ಗೆ ಗ್ರಾಫಿಕ್ ವಿಡಿಯೋದಲ್ಲಿದೆ.
ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಅನೇಕ ದಶಕಗಳ ಕನಸು. ಆದರೆ, ಈ ಯೋಜನೆಗಾಗಿ ಭೂಮಿ ಕಳೆದುಕೊಳ್ಳುವವರು ಯಾರು? ಯಾವ ಮಾರ್ಗವಾಗಿ ರೈಲು ಸಂಚರಿಸಲಿದೆ? ಎಂಬ ಮಾಹಿತಿ ಯಾರಿಗೂ ಇಲ್ಲ. ಈಗಾಗಲೇ ಅನೇಕರು ರೈಲ್ವೆ ಯೋಜನೆ ಬಗ್ಗೆ ಅಧ್ಯಯನ ನಡೆಸಿದ್ದು, ಭೂಮಿಯ ಧಾರಣಾ ಶಕ್ತಿಯ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಆದರೆ, ಹುಬ್ಬಳ್ಳಿ-ಅಂಕೋಲಾ ರೈಲ್ವೇ ಯೋಜನೆಗೆ ಸಂಬ0ಧವೇ ಇಲ್ಲದ ಜಿಎಸ್‌ಡಬ್ಲು ಕಂಪನಿ ಯಲ್ಲಾಪುರ, ಇಡಗುಂದಿ, ಅರಬೈಲು ಸೇರಿ ವಿವಿಧ ಊರುಗಳ ಹೆಸರು ಉಲ್ಲೇಖಿಸಿ ಆ ಮಾರ್ಗದಲ್ಲಿ ರೈಲು ಓಡಿಸಿ ವಿಡಿಯೋ ಹರಿಬಿಟ್ಟಿರುವುದು ಆ ಭಾಗದ ಜನರ ನಿದ್ದೆಗೆಡಿಸಿದೆ.
ಈ ಬಗ್ಗೆ ಮೊಬೈಲ್ ಮಿಡಿಯಾ ನೆಟ್‌ವರ್ಕ ಬಂದರು ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಇದೀಗ ಆ ಪತ್ರಕ್ಕೆ ಸೂಕ್ತ ಉತ್ತರ ಸಿಕ್ಕಿದೆ. `ಕೇಣಿ ಬಂದರು ಯೋಜನೆಯ ಮೊದಲ ಹಂತದಲ್ಲಿ ಮೂವತ್ತು ಮಿಲಿಯನ್ ಟನ್ಸ್ ವಿವಿಧ ಸರಕುಗಳನ್ನು ನಿರ್ವಹಿಸಲು ಉದ್ದೇಶಿಸಿದ್ದು ಇದರಿಂದ ಖಂಡಿತವಾಗಿ ಈ ಭಾಗದಲ್ಲಿ ಹುಬ್ಬಳ್ಳಿ ಅಂಕೋಲಾ ರೈಲ್ವೆ ಲೈನಿನ ಯೋಜನೆಯನ್ನು ಕಾರ್ಯಗತಗೊಳಿಸಲು ಸಹಕಾರಿಯಾಗಲಿದೆ. ಕೇಂದ್ರ ಸರಕಾರದ ರೈಲ್ವೆ ಇಲಾಖೆಯ ಈ ಯೋಜನೆಯು ಆರ್ಥಿಕವಾಗಿ ಲಾಭದಾಯಕವಾಗಿ ಅನುಷ್ಠಾನಗೊಳಿಸಲು ಕೇಣಿ ಬಂದರು ಪೂರಕವಾಗಲಿದೆ’ ಎಂದು ಕಂಪನಿ ಹೇಳಿದೆ.
`JSW ವತಿಯಿಂದ ಸಾರ್ವಜನಿಕರ ಮಾಹಿತಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಪಡಿಸಿರುವ ಗ್ರಾಫಿಕ್ ವಿಡಿಯೋ ಕೇವಲ ಪೂರ್ವಬಾವಿ ಮಾಹಿತಿಗಾಗಿ ಬಿಡುಗಡೆಗೊಳಿಸಿದ್ದಾಗಿದೆ. ಇದು ಯಾವುದೇ ನೈಜ ತಾಂತ್ರಿಕ ಮಾಹಿತಿಯನ್ನು ಒಳಗೊಂಡಿರುವುದಿಲ್ಲ. ಹುಬ್ಬಳ್ಳಿ ಅಂಕೋಲಾ ರೈಲ್ವೆ ಯೋಜನೆಯನ್ನು ಕೇಂದ್ರ ಸರಕಾರದ ನೈಋತ್ಯ ರೈಲ್ವೆ ವಿಭಾಗವು ಅನುಷ್ಠಾನಗೊಳಿಸಲಿದ್ದು, ಈ ಪ್ರಕ್ರಿಯೆಯಲ್ಲಿ JSW ಒಳಗೊಂಡಿರುವುದಿಲ್ಲ. ಆದರೆ ಕೇಣಿ ಬಂದರಿನಿOದ ಈ ಯೋಜನೆಯ ಅನುಷ್ಠಾನಕ್ಕೆ ಹೆಚ್ಚಿನ ಬಲ ಬರಲಿದೆ ಎಂಬುದನ್ನು ವ್ಯಕ್ತಪಡಿಸುವದು ಮಾತ್ರ ಗ್ರಾಫಿಕ್ ವಿಡಿಯೋದ ಉದ್ದೇಶವಾಗಿದೆ’ ಎಂದು ಕಂಪನಿ ಪ್ರತಿಕ್ರಿಯಿಸಿದೆ.
Discussion about this post