ಯಲ್ಲಾಪುರ, ಅಂಕೋಲಾ, ಸಿದ್ದಾಪುರ, ಮುಂಡಗೋಡ ಹಾಗೂ ಶಿರಸಿಯ ಬನವಾಸಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಗ್ರಾಮೀಣ ಭಾಗದ ವಾತಾವರಣ ಹದಗೆಡಿಸುತ್ತಿದ್ದವರ ಮೇಲೆ ಕಠಿಣ ಕ್ರಮ ಜರುಗಿಸಿದ್ದಾರೆ.
ಯಲ್ಲಾಪುರ ಹುಣಶೆಟ್ಟಿಕೊಪ್ಪದಲ್ಲಿ ಚಂದ್ರಕಾoತ ತಿನ್ನೇಕರ್ ಅವರು ಮದ್ಯ ಮಾರಾಟ ಮಾಡುತ್ತಿದ್ದರು. ತಾತ್ಕಾಲಿಕ ಶೆಡ್ ನಿರ್ಮಿಸಿದ್ದ ಅವರು ಅಲ್ಲಿಗೆ ಆಗಮಿಸಿದವರಿಗೆ ಮದ್ಯ ಪೂರೈಸುತ್ತಿದ್ದರು. ಸೇವನೆಗೆ ಯೋಗ್ಯವಿಲ್ಲದ ಮದ್ಯ ಸೇವಿಸಿ ಆ ಭಾಗದ ಜನ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದು, ಇದನ್ನು ಸಹಿಸದ ಯಲ್ಲಾಪುರ ಪಿಎಸ್‌ಐ ಯಲ್ಲಾಲಿಂಗ ಕನ್ನೂರು ಮದ್ಯ ಮಾರಾಟಕ್ಕೆ ತಡೆ ಒಡ್ಡಿದರು. ಆ ಶೆಡ್ಡಿನ ಮೇಲೆ ದಾಳಿ ನಡೆಸಿ ಅಲ್ಲಿದ್ದ ಮದ್ಯ ಹಾಗೂ ಗ್ಲಾಸುಗಳನ್ನು ವಶಕ್ಕೆಪಡೆದರು. ಜೊತೆಗೆ ಚಂದ್ರಕಾoತ ತಿನ್ನೇಕರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡರು.
ಅoಕೋಲಾದ ಅಂದ್ಲೆಯಲ್ಲಿ ವ್ಯಾಪಾರ ಮಾಡುವ ನಾಗರಾಜ ನಾಯ್ಕ ಅವರು ಅಂದ್ಲೆ ಕ್ರಾಸಿನ ಮುಂದಿರುವ ಅಂಗಡಿ ಕಟ್ಟೆ ಮೇಲೆ ಮದ್ಯ ಮಾರಾಟ ಮಾಡುತ್ತಿದ್ದರು. ಕಟ್ಟೆ ಮೇಲೆ ಕುಳಿತವರಿಗೆ ಸರಾಯಿ ನೀಡಿ ಅವರು ಉಪಚರಿಸುತ್ತಿದ್ದರು. ಮದ್ಯದ ಜೊತೆ ನೀರಿನ ಬಾಟಲಿಯನ್ನು ನೀಡಿ ಅವರು ಗ್ರಾಹಕರ ಕ್ಷೇಮ ನೋಡಿಕೊಳ್ಳುತ್ತಿದ್ದರು. ಆದರೆ, ಮದ್ಯ ಮಾರಾಟಕ್ಕೆ ಅವರ ಬಳಿ ಅನುಮತಿಯಿರಲಿಲ್ಲ. ಹೀಗಾಗಿ ಅಂಕೋಲಾ ಪಿಎಸ್‌ಐ ಉದ್ಧಪ್ಪ ಧರಪ್ಪನವರ್ ಮದ್ಯ ಮಾರಾಟಕ್ಕೆ ತಡೆ ಒಡ್ಡಿದ್ದು, ನಾಗರಾಜ ನಾಯ್ಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡರು.
ಅoಕೋಲಾ ಬೊಬ್ರುವಾಡದ ಮುರಾರಿ @ ದೀಪಕ ನಾಯ್ಕ ಸಹ ಅಂಕೋಲಾ ಪಟ್ಟಣದ ಲೈಬ್ರೆರಿಯಿಂದ ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದರು. ಅಲ್ಲಿ ಆಗಮಿಸಿದವರಿಗೆ ಕುಡಿಯಲು ಸರಾಯಿ ಕೊಟ್ಟು ಕಾಸು ಪಡೆಯುತ್ತಿದ್ದರು. ಗೂಡಂಗಡಿಯಲ್ಲಿ ಅವರು ದಾಸ್ತಾನು ಮಾಡಿದ್ದ ಮದ್ಯವನ್ನು ಪಿಎಸ್‌ಐ ಸುನೀಲ ಹುಲ್ಲೊಳ್ಳಿ ವಶಕ್ಕೆಪಡೆದು ಕ್ರಮ ಜರುಗಿಸಿದರು.
ಮುಂಡಗೋಡಿನ ಹನುಮಾಪುರದ ಸತೀಶ ವಾಲ್ಮಿಕಿ ಅವರು ಪಾಳಾದಲ್ಲಿ ಹೊಟೇಲ್ ವ್ಯಾಪಾರ ಮಾಡಿಕೊಂಡದ್ದರು. ಹಳ್ಳಿಮನೆ ಹೊಟೇಲಿನಲ್ಲಿ ಅವರು ಸರಾಯಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಪಿಎಸ್‌ಐ ವಿನೋದ ಎಸ್ ಕೆ ಮಾಹಿತಿಪಡೆದರು. ಹಳ್ಳಿಮನೆ ಹೊಟೇಲ್ ಮೇಲೆ ದಾಳಿ ನಡೆಸಿ ಅಲ್ಲಿದ್ದ ಅಕ್ರಮ ಸರಾಯಿಯನ್ನು ವಶಕ್ಕೆಪಡೆದರು. ಅಲ್ಲಿದ್ದ ಹಣವನ್ನು ಜಪ್ತುಮಾಡಿಕೊಂಡು ಪ್ರಕರಣ ದಾಖಲಿಸಿದರು.
ಶಿರಸಿ ಬನವಾಸಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಚಂದ್ರ ಗಣಪಮೊಗೇರ್ ಅವರು ಸುಗಾವಿ ಗ್ರಾಮ ಪಂಚಾಯತ ರಸ್ತೆಯಲ್ಲಿ ಸರಾಯಿ ಮಾರಾಟ ಮಾಡುತ್ತಿದ್ದರು. ಅಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ಬಂದು ಹೋಗುವವರಿಗೆ ಮದ್ಯ ಕುಡಿಸಿ ಕಾಸುಪಡೆಯುತ್ತಿದ್ದರು. ಬನವಾಸಿ ಪಿಎಸ್‌ಐ ಸುನೀಲಕುಮಾರ ಬಿ ವೈ ಅವರ ಗ್ರಹಚಾರ ಬಿಡಿಸಿದರು. ಮದ್ಯದ ಮಳಿಗೆ ಮೇಲೆ ದಾಳಿನಡೆಸಿ ಅಕ್ರಮ ಮದ್ಯವಶಕ್ಕೆಪಡೆದು ಪ್ರಕರಣ ದಾಖಲಿಸಿದರು.
ಶಿರಸಿ ಗೋಣೂರಿನ ಕಾಯಿಗುಡ್ಡೆಯ ಶ್ರೀಧರ ನಾಯ್ಕ ಅವರು ಅಕ್ರಮ ಮದ್ಯ ಮಾರಾಟದಿಂದ ಬದುಕು ಕಟ್ಟಿಕೊಂಡಿದ್ದರು. ಕಾಯಿಗುಡ್ಡೆಯ ಮೇಲೆ ಶೆಡ್ ನಿರ್ಮಿಸಿ ಮದ್ಯ ದಾಸ್ತಾನು ಮಾಡಿಕೊಂಡಿದ್ದರು. ಬಂದು-ಹೋಗುವವರಿಗೆ ಅದನ್ನು ವಿತರಿಸಿ ಹಣಪಡೆಯುತ್ತಿದ್ದರು. ಹೆಚ್ಚುವರಿ ಹಣ ಕೊಡುವವರಿಗೆ ಅಲ್ಲಿಯೇ ಕುಳಿತು ಮದ್ಯ ಸೇವಿಸಲು ಅವಕಾಶ ಮಾಡಿಕೊಟ್ಟಿದ್ದರು. ಬನವಾಸಿ ಪಿಎಸ್‌ಐ ಮಹಾಂತಪ್ಪ ಕುಂಬಾರ್ ಅವರು ದಾಳಿ ನಡೆಸಿ ಈ ಕ್ರಮ ನಿಲ್ಲಿಸಿದರು. ಜೊತೆಗೆ ಕಾನೂನು ಕ್ರಮ ಜರುಗಿಸಿದರು.
ಕೊರ್ಲಕಟ್ಟಾ ಮರಗುಂಡಿಯಲ್ಲಿ ಅಡುಗೆ ಕೆಲಸ ಮಾಡುವ ಪುರಂಧರ ನಾಯ್ಕ ಅಡುಗೆ ಕೆಲಸ ಇಲ್ಲದ ಕಾರಣ ಸರಾಯಿ ಮಾರಾಟಕ್ಕಿಳಿದಿದ್ದರು. ಕಡಗೋಡ ಗ್ರಾಮದ ಮುದ್ರಳ್ಳಿ ಡಾಬಾ ಬಳಿ ಶೆಡ್ ನಿರ್ಮಿಸಿ ಮದ್ಯ ಮಾರಾಟ ಮಾಡುವಾಗ ಅವರು ಸಿದ್ದಾಪುರ ಪೊಲೀಸ್ ನಿರೀಕ್ಷಕ ಸೀತಾರಾಮ ಜೆಬಿ ಬಳಿ ಸಿಕ್ಕಿಬಿದ್ದರು. ಅವರ ಮೇಲೆಯೂ ಪೊಲೀಸರು ಕಾನೂನು ಕ್ರಮ ಜರುಗಿಸಿದರು.
Discussion about this post