ಹೊನ್ನಾವರದ ಕಾಸರಕೋಡಿನ ವಿಠ್ಠಲ ಗಾಯತೊಂಡೆ ಹಾಗೂ ವೈಕುಂಠ ಗಾಯತೋಡೆ ಅವರು ತಮ್ಮ ಭೂಮಿಯಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಅನುಮತಿ ನೀಡಿದ್ದು, ಟವರ್ ನಿರ್ಮಾಣ ಮಾಡಿದ ಜಿಟಿಎಲ್ ಇನ್‌ಫ್ರಾಸ್ಟಕ್ಚರ್ ಲಿಮಿಟೆಡ್ ಅವರಿಗೆ ಹಣ ಕೊಡದೇ ಮೋಸ ಮಾಡಿದೆ. ಈ ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕ ಆಯೋಗ ಜಿಟಿಎಲ್ ಇನ್‌ಫ್ರಾಸ್ಟಕ್ಚರ್ ಲಿಮಿಟೆಡ್ ಕಂಪನಿಯನ್ನು ತರಾಠೆಗೆ ತೆಗೆದುಕೊಂಡಿದ್ದು, ಸೂಕ್ತ ಪರಿಹಾರ ವಿತರಣೆಗೆ ಆದೇಶಿಸಿದೆ.
ವಿಠ್ಠಲ ಗಾಯತೊಂಡೆ ಹಾಗೂ ವೈಕುಂಠ ಗಾಯತೋಡೆ ಅವರು ತಮ್ಮ ಭೂಮಿಯಲ್ಲಿ ಟವರ್ ನಿರ್ಮಿಸಲು ಕರಾರು ಮಾಡಿಕೊಂಡಿದ್ದರು. ಅದರ ಪ್ರಕಾರ ಪ್ರತಿ ತಿಂಗಳು ಅವರಿಗೆ ಕಂಪನಿ 3 ಸಾವಿರ ರೂ ಬಾಡಿಗೆ ಕೊಡಬೇಕಿತ್ತು. ಆದರೆ, ಅನೇಕ ವರ್ಷಗಳಿಂದ ಬಾಡಿಗೆ ಆಧಾರದಲ್ಲಿ ಬರಬೇಕಿದ್ದ 5,32,950ರೂ ಹಣವನ್ನು ಕೊಟ್ಟಿರಲಿಲ್ಲ. ಕಂಪನಿ ಸೇವಾ ನ್ಯೂನತೆ ಹಾಗೂ ಅನುಚಿತ ವ್ಯಾಪಾರ ನೀತಿಯನ್ನು ಭೂ ಮಾಲಕರು ಪ್ರಶ್ನಿಸಿದ್ದರು. ಗ್ರಾಹಕ ನ್ಯಾಯಾಲಯವೂ 5,39,950 ಜೊತೆಗೆ ಶೇ 8ರ ಬಡ್ಡಿ, ಪ್ರಕರಣದ ವೆಚ್ಚ 10,000, ಪಂಚಾಯತಿ ಕರ ಅಂದಾಜು ರೂ 2,25,000 ಸೇರಿ ಒಟ್ಟು 7,74,950ರೂ ಪಾವತಿಸಬೇಕು ಎಂದು ಕಂಪನಿಗೆ ಆದೇಶಿಸಿದೆ.
ಆಯೋಗದ ಪ್ರಭಾರ ಅಧ್ಯಕ್ಷ ಮಂಜುನಾಥ್ ಎಂ ಬಮ್ಮನಕಟ್ಟಿ ಹಾಗೂ ಸದ್ಯಸೆ ನೈನಾ ಕಾಮಟೆ ಅವರು ಜಿಟಿಎಲ್ ಇನ್‌ಫ್ರಾಸ್ಟçಕ್ಚರ್ ಲಿಮಿಟೆಡ್ ಸಂಸ್ಥೆಯವರು ದೂರುದಾರರ ಜಾಗದಲ್ಲಿ ಟವರ್ ಸ್ಥಾಪಿಸಿ ಅದರ ಬಾಡಿಗೆ ಮೊತ್ತ ನೀಡದ ಕಾರಣ ಕಂಪನಿ ವಿರುದ್ಧ ಗರಂ ಆಗಿದ್ದಾರೆ. ಆ ಟವರ್ ತೆಗೆದು ಜಾಗ ಖಾಲಿ ಮಾಡಿಕೊಡಬೇಕು ಎಂದು ಅವರು ಸೂಚಿಸಿದ್ದಾರೆ. ದೂರುದಾರರ ಪರವಾಗಿ ನ್ಯಾಯಾವಾದಿ ಎನ್ ಎಸ್ ಭಟ್ ವಾದ ಮಂಡಿಸಿದ್ದು, ಕಕ್ಷಿದಾರರಿಗೆ ನ್ಯಾಯ ಕೊಡಿಸಿದ್ದಾರೆ.
Discussion about this post