ಉತ್ತರಕನ್ನಡ ಜಿಲ್ಲೆಯ ಪರಿಸರ ಛಾಯಾಗ್ರಾಹಕ ಕಾರವಾರದ ಪಾಂಡುರoಗ ಹರಿಕಂತ್ರ ಇನ್ನಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತಮ್ಮ 63ನೇ ವಯಸ್ಸಿನಲ್ಲಿ ಕೊನೆ ಉಸಿರೆಳೆದಿದ್ದಾರೆ.
ಕಾರವಾರದ ಕೋಣೆವಾಡದ ಪಾಂಡುರoಗ ಹರಿಕಂತ್ರ ಅವರು ಅತ್ಯದ್ಬುತ ಛಾಯಾಚಿತ್ರಗಾರರಾಗಿದ್ದರು. ಕಡಲು, ಕಾನನ ಸೇರಿ ಸಾವಿರಾರು ಚಿತ್ರಗಳನ್ನು ಅವರು ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿದಿದ್ದರು. ಜಿಲ್ಲಾ ಮೀನು ಮಾರಾಟ ಫೆಡರೇಶನ್ ಉದ್ಯೋಗಿಯಾಗಿದ್ದ ಅವರು ಸ್ವಯಂ ಪ್ರೇರಣೆಯಿಂದ ನಿವೃತ್ತಿಪಡೆದಿದ್ದರು.
ಕಾರವಾರದ ಅದ್ಬುತ ನಿಸರ್ಗ ಸೌಂದರ್ಯವನ್ನು ಅವರು ಸೆರೆ ಹಿಡಿದು ವಿಶ್ವದ ಎಲ್ಲಡೆ ಅದರ ಖ್ಯಾತಿ ಮೂಡಿಸಿದ್ದರು. ಪಾಂಡುರoಗ ಹರಿಕಂತ್ರ ಅವರು ತೆಗೆದಿದ್ದ ಕಾರವಾರ ಕಡಲತೀರ ಮತ್ತು ಕಾಳಿ ನದಿಯ ಮೀನುಗಾರರ ಜೀವನ ಶೈಲಿಯ ಅತ್ಯುತ್ತಮ ಚಿತ್ರಗಳು ಎಲ್ಲಡೆ ಪ್ರಕಟವಾಗಿದ್ದವು. ಕನ್ನಡ ಮತ್ತು ಇಂಗ್ಲೀಷ್ ಪತ್ರಿಕೆಗಳಲ್ಲಿ ನಿರಂತರವಾಗಿ ಅವು ಪ್ರಕಟವಾಗುತ್ತಿದ್ದವು.
ಸೀಬರ್ಡ್ ನೌಕಾನೆಲೆ ಆಗುವ ಪೂರ್ವದಲ್ಲಿ ಮುಂಜಾನೆಯೆ ತಮ್ಮ ಕ್ಯಾಮರಾ ಬ್ಯಾಗ್ ಹೆಗಲಿಗೇರಿಸಿ ನಡೆಯುತ್ತಿದ್ದ ಪಾಂಡುರ0ಗ ಹರಿಕಂತ್ರ ಅವರು ಗ್ರಾಮೀಣ ಚಿತ್ರಗಳನ್ನು ಕ್ಲಿಕ್ಕಿಸುತ್ತಿದ್ದರು. ಕಡಲಮಕ್ಕಳ, ಕೃಷಿಕರ, ಪಕ್ಷಿಗಳ ಅದ್ಬುತ ಚಿತ್ರಗಳಿಗೆ ಅವರು ಕನಸಾಗಿದ್ದರು. ಕರಾವಳಿ ಜನರ ನಾಡಿಮಿಡಿತವನ್ನ ಬಿಂಬಿಸುವ ಸಾವಿರಾರು ಚಿತ್ರಗಳು ಅವರಲ್ಲಿದ್ದವು. ಅವರ ಚಿತ್ರಗಳನ್ನು ಅನೇಕ ಹೊಟೇಲ್, ಪ್ರವಾಸಿ ತಾಣಗಳಲ್ಲಿ ಪ್ರದರ್ಶಿಸಲಾಗುತ್ತಿದೆ.
2018ರಲ್ಲಿ ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿಗೆ ಪಾಂಡುರ0ಗ ಹರಿಕಂತ್ರ ಅವರು ಭಾಜನರಾಗಿದ್ದರು. ಕರ್ನಾಟಕ ಪೋಟೋ ನ್ಯೂಸ್ ಸುದ್ದಿ ಸಂಸ್ಥೆಯ ಕಾರವಾರ ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೆಲ ವರ್ಷಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಪಾಂಡುರoಗ ಚೇತರಿಸಿಕೊಂಡಿದ್ದರು. ಆದರೆ ಶುಕ್ರವಾರ ರಾತ್ರಿ ಮತ್ತೊಮ್ಮೆ ಧಿಡೀರ್ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿ ಸಾವನಪ್ಪಿದರು.
Discussion about this post