ಐದು ಲಕ್ಷ ರೂ ಮೌಲ್ಯದ ಕಾರಿನಲ್ಲಿ 5 ಸಾವಿರಕ್ಕಿಂತ ಕಡಿಮೆ ಮೌಲ್ಯದ ಮಾದಕ ವಸ್ತು ಸಾಗಿಸಿ ಶಿರಸಿಯ ಯುವಕರಿಬ್ಬರು ಸಿಕ್ಕಿ ಬಿದ್ದಿದ್ದಾರೆ. ಅವರ ಬಳಿಯಿದ್ದ ಗಾಂಜಾ ಜೊತೆ ಕಾರನ್ನು ವಶಕ್ಕೆಪಡೆದ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
ಶಿರಸಿ ಹುಲೆಕಲ್ ರಸ್ತೆಯ ಬಕ್ಕಳ ಬಳಿಯ ಗದ್ದೆಮನೆ ವಿಕ್ರಮ ಭಟ್ಟ (28) ಹಾಗೂ ಯಡಳ್ಳಿ ಬಳಿಯ ಸಿರ್ಸಿಮಕ್ಕಿಯ ಕಶ್ಯಪ್ ಹೆಗಡೆ (27) ಅವರಿಗೆ ಮಾಡಲು ಉತ್ತಮ ಉದ್ಯೋಗವಿದ್ದರೂ ಅಡ್ಡದಾರಿ ಹಿಡಿದಿದ್ದರು. ಅವರು ಅಕ್ರಮದ ಹಾದಿಯಲ್ಲಿ ಹಣ ಸಂಪಾದನೆಗಿಳಿದಿದ್ದರು. ಗಾಂಜಾ ಮಾರಾಟದಿಂದ ಬಹುಬೇಗ ಶ್ರೀಮಂತರಾಗಬಹುದು ಎಂದು ಅಂದಾಜಿಸಿದ ಅವರು ಕಾನೂನುಬಾಹಿರ ಚಟುವಟಿಕೆಗಿಳಿದರು.
ಅದರಂತೆ, ಶನಿವಾರ ನಸುಕಿನಲ್ಲಿ ವಿಕ್ರಮ ಭಟ್ಟ ಹಾಗೂ ಕಶ್ಯಪ ಹೆಗಡೆ ಸೇರಿ ಗಾಂಜಾ ಮಾರಾಟಕ್ಕಾಗಿ ಗಿರಾಕಿ ಹುಡುಕುತ್ತಿದ್ದರು. ಗಿಡಮಾವಿನಕಟ್ಟೆ ಹತ್ತಿರದ ಬರೂರು ತಪಾಸಣಾ ಕೇಂದ್ರದ ಬಳಿ ಪೊಲೀಸರು ಅವರ ಕಾರಿಗೆ ಅಡ್ಡಲಾಗಿ ಕೈ ಮಾಡಿದರು. ಈ ಇಬ್ಬರ ಬಗ್ಗೆಯೂ ಮೊದಲೇ ಕಣ್ಣಿಟ್ಟಿದ್ದ ಪೊಲೀಸರು ಟೊಯೋಟಾ ಇನ್ನೋವಾ ಕಾರು ತಪಾಸಣೆ ನಡೆಸಿದರು. ಪೊಲೀಸರ ಅನುಮಾನದಂತೆ ಆ ಕಾರಿನೊಳಗೆ ಗಾಂಜಾ ಕಂಡಿತು.
ಆದರೆ, ಅವರಿಬ್ಬರು ಗಾಂಜಾ ಸೇವಿಸಿರುವಂತೆ ಕಾಣಲಿಲ್ಲ. ವಿಚಾರಿಸಿದಾಗ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿರುವುದು ಗೊತ್ತಾಯಿತು. ಬೇರೆಯವರ ಬದುಕು ಹಾಳು ಮಾಡಲು ಹೊರಟ ಅವರಿಬ್ಬರನ್ನು ಶಿರಸಿ ಗ್ರಾಮೀಣ ಠಾಣೆಯ ಪೋಲಿಸರು ಅಲ್ಲಿಯೇ ಬಂಧಿಸಿದರು. 5 ಲಕ್ಷ ರೂ ಮೌಲ್ಯದ ಕಾರಿನ ಜೊತೆ ಆ ವಾಹನದಲ್ಲಿದ್ದ 80 ಗ್ರಾಂ ಗಾಂಜಾವನ್ನು ಪೊಲೀಸರು ಜಪ್ತು ಮಾಡಿದರು.
`ಮಾದಕ ವ್ಯಸನದ ವಿರುದ್ಧ ಎಲ್ಲರೂ ಹೋರಾಟನಡೆಸಬೇಕು’ ಎಂದು ಶಿರಸಿ ಡಿವೈಎಸ್‌ಪಿ ಗೀತಾ ಪಾಟೀಲ್ ಅವರು ಕರೆ ನೀಡಿದ್ದು, ಸಿಪಿಐ ಮಂಜುನಾಥ ಗೌಡ, ಪಿಎಸ್‌ಐ ಸಂತೋಷಕುಮಾರ ಅವರು ಆ ಯುವಕರಿಬ್ಬರಿಗೆ ಗಾಂಜಾ ದುಷ್ಪರಿಣಾಮದ ಬಗ್ಗೆ ಅಲ್ಲಿಯೇ ಅರಿವು ಮೂಡಿಸಿದರು.
Discussion about this post