ಕೆಪಿಸಿ ಅಧೀನದ ಕೊಡಸಳ್ಳಿ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಕಳೆದ ಎರಡು ವಾರದಿಂದ ಕರೆಂಟ್ ಇಲ್ಲ. ಹೀಗಾಗಿ `ವಿದ್ಯುತ್ ಪೂರೈಕೆ ಮಾಡಿ’ ಎಂದು ಅಲ್ಲಿನ ಅಧಿಕಾರಿಗಳು ಹೆಸ್ಕಾಂ ಕಚೇರಿಗೆ ಪತ್ರ ಬರೆದಿದ್ದಾರೆ!
ಕೊಡಸಳ್ಳಿ ವಿದ್ಯುತ್ಗಾರವೂ 120 ಮೇಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಶಕ್ತಿಹೊಂದಿದೆ. ಅಣೆಕಟ್ಟು ಹಾಗೂ ವಿದ್ಯುತ್ಗಾರ ನಿರ್ವಹಣೆಗೆ ಅಲ್ಲಿಯೇ ಉತ್ಪಾದನೆ ಆದ ವಿದ್ಯುತ್ ಬಳಕೆಗೆ ಕಾನೂನು ತೊಡಕಿದೆ. ಹೀಗಾಗಿ ಈ ವಿದ್ಯುತ್ ಉತ್ಪಾದನೆಗೆ ಹೆಸ್ಕಾಂ ವಿದ್ಯುತ್ ಪೂರೈಸುವುದು ಅನಿವಾರ್ಯ.
ಆದರೆ, ಕಳೆದ 16 ದಿನಗಳಿಂದ ಇಲ್ಲಿ ವಿದ್ಯುತ್ ಸರಬರಾಜು ಆಗಿಲ್ಲ. ಹೀಗಾಗಿ ಸದ್ಯ ಅಣೆಕಟ್ಟು ತುಂಬ ನೀರಿದ್ದರೂ ಅಣೆಕಟ್ಟು ನಿರ್ವಹಣೆ ಮಾಡಿ ವಿದ್ಯುತ್ ಉತ್ಪಾದನೆ ಮಾಡಲು ಅಲ್ಲಿನ ಅಧಿಕಾರಿಗಳಿಗೆ ಕಷ್ಟವಾಗಿದೆ. ಸದ್ಯ ಜನರೇಟರ್ ಬಳಸಿ ನಿರ್ವಹಣೆಯ ಕೆಲಸ ಮಾಡಲಾಗುತ್ತಿದ್ದು, ಹೆಸ್ಕಾಂ ವಿದ್ಯುತ್ ಪೂರೈಕೆ ಮಾಡದೇ ಇದ್ದರೆ ಅಣೆಕಟ್ಟಿನ ನೀರನ್ನು ವ್ಯರ್ಥವಾಗಿ ಹೊರಗೆ ಬಿಡಬೇಕಾದ ಅನಿವಾರ್ಯ ಸೃಷ್ಠಿಯಾಗಿದೆ.
ಕದ್ರಾ-ಕೊಡಸಳ್ಳಿ ಸಂಪರ್ಕಿಸುವ ರಸ್ತೆ ಮೇಲೆ ಭಾರೀ ಪ್ರಮಾಣದಲ್ಲಿ ಮಣ್ಣು ಬಿದ್ದಿದೆ. ಇದರಿಂದ ಆ ಮಾರ್ಗದ ಸಂಚಾರ ಅಸ್ತವ್ಯಸ್ಥಗೊಂಡಿದ್ದು ಅಣೆಕಟ್ಟು ಅಧಿಕಾರಿಗಳು ಸ್ಥಳಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಪರ್ಯಾಯ ವ್ಯವಸ್ಥೆಗಾಗಿ ಜನರೇಟರ್ ಇಟ್ಟುಕೊಂಡಿದ್ದರಿoದ ಬೆಳಕಿಗೆ ಇದೀಗ ಸಮಸ್ಯೆ ಇಲ್ಲ. ಆದರೆ, ಜನರೇಟರ್ ಇಂಧನ ಖಾಲಿ ಆದರೂ ಅಲ್ಲಿನವರು ಇಂಧನಕ್ಕಾಗಿ ಪರಿತಪಿಸಬೇಕಾದ ಸ್ಥಿತಿಯಿದೆ.
ಮಳೆಗಾಲದ ಅವಧಿಯಲ್ಲಿ ಇಲ್ಲಿನವರಿಗೆ ವಿದ್ಯುತ್ ಸಮಸ್ಯೆ ಹೊಸತಲ್ಲ. ಆದರೆ, ಎರಡು ವಾರಗಳ ಕಾಲ ವಿದ್ಯುತ್ ಪೂರೈಕೆ ಇಲ್ಲದಿರುವುದು ಇದೇ ಮೊದಲು. ಮಲ್ಲಾಪುರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಸುರಿದ ಗಾಳಿ-ಮಳೆಗೆ ವಿದ್ಯುತ್ ಕಂಬ ಮುರಿದಿದೆ. ಹೀಗಾಗಿ `ಅಣೆಕಟ್ಟಿಗೂ ವಿದ್ಯುತ್ ಪೂರೈಕೆ ಕಷ್ಟವಾಗಿದೆ. ಕಂಬ ಸರಿಪಡಿಸಿ ವಿದ್ಯುತ್ ಪೂರೈಕೆಗೆ ಇನ್ನಷ್ಟು ಸಮಯ ಬೇಕು’ ಎಂಬುದು ಹೆಸ್ಕಾಂ ಅಧಿಕಾರಿಗಳ ನುಡಿ.
Discussion about this post