ಶಿರಸಿಯ ಐಶ್ವರ್ಯ ಮಡಿವಾಳ ಅವರಿಗೆ ವಿನಾಯಕ ಕಬ್ಬೇರ್ ಎಂಬಾತರು ಪದೇ ಪದೇ ಮೆಸೆಜ್ ಮಾಡಿ ಪೀಡಿಸುತ್ತಿದ್ದಾರೆ. ಇದನ್ನು ಪ್ರಶ್ನಿಸಿದ ಕಾರಣ ಪ್ರಜ್ವಲ್ ಮಡಿವಾಳ ಒದೆ ತಿಂದಿದ್ದಾರೆ!
ಶಿರಸಿ ಕೊರ್ಲಕಟ್ಟಾ ಮಾಡನಗೇರಿಯಲ್ಲಿ ಪ್ರಜ್ವಲ್ ಮಡಿವಾಳ ಅವರು ಕೃಷಿ-ಕೂಲಿ ಕೆಲಸ ಮಾಡಿಕೊಂಡು ವಾಸವಾಗಿದ್ದಾರೆ. ಪ್ರಜ್ವಲ್ ಮಡಿವಾಳ ಅವರ ಮಾವನ ಮಗಳು ಐಶ್ವರ್ಯ ಮಡಿವಾಳ ಅವರಿಗೆ ವಿನಾಯಕ ಕಬ್ಬೇರ್ ಎಂಬಾತರು ಮೆಸೆಜ್ ಮಾಡುತ್ತಿದ್ದು, ಈ ವಿಷಯ ಪ್ರಜ್ವಲ್ ಮಡಿವಾಳ ಅವರಿಗೆ ಗೊತ್ತಾಗಿದೆ. ಹೀಗಾಗಿ ವಿನಾಯಕ ಕಬ್ಬೇರ್ ಅವರ ಬಗ್ಗೆ ಪ್ರಜ್ವಲ್ ಮಡಿವಾಳ ಅವರು ಅಲ್ಲಿ-ಇಲ್ಲಿ ವಿಚಾರಿಸಿದ್ದಾರೆ.
ಅದರಂತೆ ಪ್ರಜ್ವಲ್ ಮಡಿವಾಳ ಅವರು ಕೊರ್ಲಕಟ್ಟಾದ ದಯಾ ಎಂಬಾತರಲ್ಲಿಯೂ ವಿನಾಯಕ ಕಬ್ಬೇರ್ ಅವರ ಬಗ್ಗೆ ವಿಚಾರಿಸಿದ್ದಾರೆ. ಈ ವಿಷಯ ಅರಿತ ವಿನಾಯಕ ಕಬ್ಬೇರ್ ನೇರವಾಗಿ ಪ್ರಜ್ವಲ್ ಮಡಿವಾಳ ಅವರಿಗೆ ಫೋನ್ ಮಾಡಿದ್ದಾರೆ. `ನನ್ನ ಬಗ್ಗೆ ವಿಚಾರಿಸುತ್ತೀಯಾ?’ ಎಂದು ವಿನಾಯಕ ಕಬ್ಬೇರ್ ಪ್ರಶ್ನಿಸಿದ್ದಾರೆ. ಆಗ `ನನ್ನ ಮಾವನ ಮಗಳಿಗೆ ನೀ ಯಾಕೆ ಮೆಸೆಜ್ ಮಾಡುತ್ತೀಯಾ? ಅವಳ ಹಿಂದೆ ಏಕೆ ಬಿದ್ದಿದ್ದಿಯಾ?’ ಎಂದು ಪ್ರಜ್ವಲ್ ಮಡಿವಾಳ ಜೋರಾಗಿ ಮಾತನಾಡಿದ್ದಾರೆ.
ಆ ವೇಳೆ ಫೋನ್ ಕಟ್ ಮಾಡಿದ ವಿನಾಯಕ ಕಬ್ಬೇರ್ ರಾತ್ರಿ ವೇಳೆ ಗುಂಪು ಕಟ್ಟಿಕೊಂಡು ಪ್ರಜ್ವಲ್ ಮಡಿವಾಳ ಅವರ ಮನೆಗೆ ಬಂದಿದ್ದಾರೆ. `ಹುಡುಗಿ ವಿಷಯದಲ್ಲಿ ಇವ ಬಾಳ ಮಾತಾಡುತ್ತಾನೆ’ ಎಂದು ಕೂಗಾಡಿ ಪ್ರಜ್ವಲ್ ಮಡಿವಾಳ ಅವರ ಕೆನ್ನೆಗೆ ಬಾರಿಸಿದ್ದಾರೆ. ವಿನಾಯಕ ಕಬ್ಬೇರ್ ಜೊತೆಗಿದ್ದ ಸಂತೋಷ ಕಬ್ಬೇರ್ ಸಹ ಪ್ರಜ್ವಲ್ ಮಡಿವಾಳ ಅವರಿಗೆ ಎರಡು ಬಾರಿಸಿದ್ದಾರೆ. ಉಳಿದ 4-5 ಜನ ಸೇರಿ ಪ್ರಜ್ವಲ ಮಡಿವಾಳ ಅವರನ್ನು ನೆಲಕ್ಕ ದೂಡಿ ಕಾಲಿನಿಂದ ತುಳಿದಿದ್ದಾರೆ.
ಅವರೆಲ್ಲರೂ ಸೇರಿ ಕೈಯಲ್ಲಿದ್ದ ಆಯುಧಗಳಿಂದ ಪ್ರಜ್ವಲ್ ಮಡಿವಾಳ ಅವರನ್ನು ಥಳಿಸಿದ್ದಾರೆ. ಪ್ರಜ್ವಲ ಮಡಿವಾಳ ಅವರ ತಂದೆ ಮಧುಕೇಶ್ವರ ಮಡಿವಾಳ ಹಾಗೂ ಅಕ್ಕ-ಪಕ್ಕದ ಜನ ಬಂದು ಈ ಹೊಡೆದಾಟ ನಿಲ್ಲಿಸಿದ್ದು, ಆ ಕ್ಷಣಕ್ಕೆ ಪ್ರಜ್ವಲ್ ಮಡಿವಾಳ ಬಚಾವ್ ಆದರು. ಜುಲೈ 4ರ ರಾತ್ರಿ ಈ ಹೊಡೆದಾಟ ನಡೆದಿದ್ದು, ಚಿಕಿತ್ಸೆಪಡೆದ ಪ್ರಜ್ವಲ್ ಮಡಿವಾಳ ಗುರು-ಹಿರಿಯರಲ್ಲಿ ಚರ್ಚಿಸಿ ಬನವಾಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತನ್ನ ಮೇಲೆ ಆದ ಹಲ್ಲೆಯ ಬಗ್ಗೆ ಅಲ್ಲಿ ದೂರು ದಾಖಲಿಸಿದ್ದಾರೆ.
Discussion about this post