`ಕಳೆದ 45 ವರ್ಷದ ಅವಧಿಯಲ್ಲಿ ಬೋವಿ ವಡ್ಡರ್ ಸಮುದಾಯಕ್ಕೆ ಒಮ್ಮೆಯೂ ವಿಧಾನಪರಿಷತ್ ಸ್ಥಾನ ಸಿಕ್ಕಿಲ್ಲ. ಇದರಿಂದ ಸಮುದಾಯಕ್ಕೆ ದೊಡ್ಡ ಅನ್ಯಾಯವಾಗಿದೆ’ ಎಂದು ಉತ್ತರ ಕನ್ನಡ ಜಿಲ್ಲಾ ಭೋವಿ ವಡ್ಡರ್ ಸಮಾಜ ಸಂಘದವರು ಹೇಳಿದ್ದಾರೆ.
`1980ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಆರ್ ಗುಂಡೂರಾವ್ ಅವರು ಮಾಜಿ ಶಾಸಕರಾಗಿದ್ದ ಆರ್ ಪೀರಣ್ಣ ಅವರನ್ನು ಪರಿಷತ್ ಸದಸ್ಯರನ್ನಾಗಿ ಮಾಡಿದ್ದರು. ಅದಾದ ನಂತರ ಈವರೆಗೆ ಕಾಂಗ್ರೆಸ್ ಪಕ್ಷದಿಂದ ಒಬ್ಬರೇ ಒಬ್ಬ ಭೋವಿ ಜನಾಂಗದವರನ್ನು ವಿಧಾನ ಪರಿಷತ್ ಸದಸ್ಯರಾಗಿಲ್ಲ. ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 101 ಜಾತಿಗಳಲ್ಲಿ ಭೋವಿ ಜನಾಂಗವು ಸುಮಾರು 18 ಲಕ್ಷ ಜನಸಂಖ್ಯೆ ಹೊಂದಿದೆ. ಇದು ಪರಿಶಿಷ್ಟ ಜಾತಿಯಲ್ಲಿ ಮೂರನೇ ಅತಿ ದೊಡ್ಡ ಸಮುದಾಯವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಭೋವಿ ವಡ್ಡರ ಜನಾಂಗದ ಸಂಖ್ಯೆ 55 ಸಾವಿರದಷ್ಟಿದ್ದು, ಭೋವಿ ಸಮಾಜಕ್ಕೆ ಅನ್ಯಾಯವಾಗುತ್ತಿದೆ’ ಎಂದು ಸಮುದಾಯದವರು ದೂರಿದರು.
`ರಾಜ್ಯದಲ್ಲಿ ವಿಧಾನ ಪರಿಷತ್ 75 ಸ್ಥಾನಗಳನ್ನು ಹೊಂದಿದ್ದು, ಅದರಲ್ಲಿ 65 ಚುನಾಯಿತ ಮತ್ತು 11 ನಾಮನಿರ್ದೇಶಿತ ಸದಸ್ಯರಿದ್ದಾರೆ. ಪುರಸಭೆಗಳು, ನಿಗಮಗಳು, ವಿಧಾನ ಸಭೆ, ಪದವೀಧರ ಕ್ಷೇತ್ರಗಳು, ಶಿಕ್ಷಕರ ಕ್ಷೇತ್ರಗಳು ಮತ್ತು ರಾಜ್ಯಪಾಲರ ನಾಮನಿರ್ದೇಶನ ಮೂಲಕ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಪ್ರಸ್ತುತ ಕಾಂಗ್ರೆಸ್ ಪಕ್ಷ 33 ವಿ ಪ ಸದಸ್ಯರನ್ನು ಹೊಂದಿದ್ದು, ಈ ಬಾರಿ ಕಾಂಗ್ರೆಸ್ ಭೋವಿ ವಡ್ಡರ್ ಸಮಾಜಕ್ಕೆ ಅವಕಾಶ ನೀಡಬೇಕು’ ಎಂದು ಅವರೆಲ್ಲರೂ ಒತ್ತಾಯಿಸಿದರು.
ಉತ್ತರ ಕನ್ನಡ ಜಿಲ್ಲಾ ಭೋವಿ ವಡ್ಡರ್ ಸಮಾಜ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಎಚ್ ದೇಸಳ್ಳಿ ಮೂಲಕ ಈ ಬಗ್ಗೆ ಸಮುದಾಯದವರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ. ಸಮುದಾಯ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಫಕೀರಪ್ಪ ಭೋವಿ, ದ್ಯಾಮಣ ಭೋವಿವಡ್ಡರ್, ಭರಮಪ್ಪ, ಬಸವರಾಜ್, ತಿಮ್ಮಣ್ಣ ಭೋವಿ ಸಹ ಈ ಬೇಡಿಕೆಗಾಗಿ ಆಗ್ರಹಿಸಿದರು.
Discussion about this post