ಮೊದಲೆಲ್ಲ ಪ್ರಕೃತಿ ವಿಕೋಪದ ಅಡಿ ಸಂಪೂರ್ಣ ಮನೆ ಕಳೆದುಕೊಂಡವರಿಗೆ ಸರ್ಕಾರ 5 ಲಕ್ಷ ರೂ ಪರಿಹಾರ ನೀಡಿದ್ದು, ಇದೀಗ 1 ಲಕ್ಷ ರೂ ಪರಿಹಾರ ಮಾತ್ರ ನೀಡಲಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಈ ಹಣದಲ್ಲಿ ದನದ ಕೊಟ್ಟಿಗೆ ಸಹ ನಿರ್ಮಿಸಲು ಸಾಧ್ಯವಿಲ್ಲ!
ಶಿರಸಿಯಲ್ಲಿ ಮನೆ ಕಳೆದುಕೊಂಡ ರಾಧಾ ಮರಾಠಿ ಅವರ ಕುಟುಂಬಕ್ಕೆ ಸರ್ಕಾರದಿಂದ 1 ಲಕ್ಷ ರೂ ಪರಿಹಾರದ ಭರವಸೆ ಸಿಕ್ಕಿದೆ. ಅದು-ಇದೂ ಪ್ರಯತ್ನ ಮಾಡಿದರೆ ಸರ್ಕಾರದಿಂದ ಗರಿಷ್ಟ 2.50 ಲಕ್ಷ ರೂಪಾಯಿವರೆಗೆ ಪರಿಹಾರ ಸಿಗಲಿದೆ. ಇದರೊಂದಿಗೆ ವೈಯಕ್ತಿಕವಾಗಿಯೂ ಕಾಂಗ್ರೆಸ್ಸಿನಿoದ ಆಯ್ಕೆಯಾದ ಶಾಸಕ ಭೀಮಣ್ಣ ನಾಯ್ಕ, ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಹಾಗೂ ಜೆಡಿಎಸ್ ಪಕ್ಷದ ಉಪೇಂದ್ರ ಪೈ ಅವರು ರಾಧಾ ಮರಾಠಿ ಕುಟುಂಬದವರಿಗೆ ನೆರವಾಗಿದ್ದಾರೆ. ಆದರೆ, ಈ ಎಲ್ಲಾ ಹಣ ಸೇರಿಸಿದರೂ ರಾಧಾ ಮರಾಠಿ ಅವರ ಹೊಸ ಮನೆ ನಿರ್ಮಾಣ ಸಾಧ್ಯವಿಲ್ಲ.
2023-24ರವರೆಗೂ ಪೂರ್ಣ ಪ್ರಮಾಣದಲ್ಲಿ ಮನೆ ಬಿದ್ದರೆ 5 ಲಕ್ಷ ರೂ ಪರಿಹಾರ ಸಿಗುತ್ತಿತ್ತು. ಶೇ 50ರಷ್ಟು ಮನೆ ಬಿದ್ದರೂ 5 ಲಕ್ಷ ರೂ ನೀಡಲಾಗುತ್ತಿತ್ತು. ಆ ಅವಧಿಯಲ್ಲಿ ದುರಸ್ಥಿಗೆ 3 ಲಕ್ಷ ರೂ ಕೊಡಲಾಗುತ್ತಿತ್ತು. ಆದರೆ, 2024-25ನೇ ಸಾಲಿನಿಂದ ಇದೆಲ್ಲವೂ ಬದಲಾಯಿತು. ಶೇ 20ರಷ್ಟು ಮನೆ ಹಾನಿ ಆದವರಿಗೆ 6500ರೂ, ಶೇ 50ರಷ್ಟು ಹಾನಿ ಆದವರಿಗೆ 30 ಸಾವಿರ ರೂ, ಪೂರ್ತಿ ಮನೆ ಕುಸಿತವಾದರೆ 1.20 ಲಕ್ಷ ರೂ ನೀಡಲು ಸರ್ಕಾರ ನಿರ್ಧರಿಸಿತು. ಇದರೊಂದಿಗೆ ಮನೆ ಕುಸಿತದಿಂದ ಆರ್ಥಿಕವಾಗಿ ಕುಗ್ಗಿದವರು ಪ್ರಯತ್ನ ಮಾಡಿದರೆ ದೇವರಾಜು ಅರಸು ವಸತಿ ನಿಗಮದಿಂದ ನಾಲ್ಕು ಹಂತದಲ್ಲಿ 1.20 ಲಕ್ಷ ರೂ ಪಡೆಯಲು ಅವಕಾಶವಿದ್ದು, ಈ ಎಲ್ಲಾ ಮೊತ್ತ ಸೇರಿಸಿದರೂ ಹೊಸ ಮನೆ ನಿರ್ಮಾಣ ಅಸಾಧ್ಯ.
ಇನ್ನೂ ಉತ್ತರ ಕನ್ನಡ ಜಿಲ್ಲೆಗೆ ಹಿರಿಯ ಅಧಿಕಾರಿಗಳು ವರ್ಗವಾಗಿ ಬಂದಾಗ ಅವರ ಸರ್ಕಾರಿ ಮನೆ ಹಾಗೂ ಕಚೇರಿ ನವೀಕರಣಕ್ಕೆ 5-10 ಲಕ್ಷ ವೆಚ್ಚ ಮಾಡಲಾಗುತ್ತದೆ. ಅವರವರ ಇಚ್ಚೆಗೆ ಅನುಗುಣವಾಗಿ ವಾಸ್ತು ಬದಲಾವಣೆ, ಪ್ರವೇಶದ ದಿಕ್ಕು ಬದಲಾವಣೆ ಸೇರಿ ಶೌಚಾಲಯವನ್ನು ಸ್ಥಳಾಂತರಿಸಿದ ಉದಾಹರಣೆಗಳು ಇವೆ. ಹಿಂದೊಮ್ಮೆ ಅಧಿಕಾರಿಯೊಬ್ಬರ ನಿವಾಸಕ್ಕೆ ಚಿನ್ನಲೇಪಿತ ಬಣ್ಣದ ನಾಮಫಲಕ ಅಳವಡಿಸಲು 17 ಸಾವಿರ ರೂ ವೆಚ್ಚ ಮಾಡಿದ್ದು ಹಳೆಯ ವಿಷಯ. ಆದರೆ, ಬಡವರ ಮನೆ ಬಿದ್ದಾಗ ಮಾತ್ರ ಸರ್ಕಾರ ಪರಿಹಾರ ನೀಡುವ ವಿಷಯದಲ್ಲಿ ಕಂಜೂಸ್ ಬುದ್ದಿ ಪ್ರದರ್ಶಿಸುತ್ತಿದೆ.
Discussion about this post