ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಬಳಸುತ್ತಿರುವ ಮೊಬೈಲ್ ಸಂಖ್ಯೆಗೆ ಫೋನ್ ಮಾಡಿದರೆ `ರಿಚಾರ್ಜ ಮಾಡಿ’ ಎಂಬ ಧ್ವನಿ ಕೇಳುತ್ತಿದೆ. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದು ಅವರ ಸರ್ಕಾರಿ ಫೋನ್ ನಂ’ಗೆ ಕರೆ ಮಾಡಿದರೆ ಕರೆ ಸ್ವೀಕರಿಸುವವರೇ ಇಲ್ಲ!
ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸಾರ್ವಜನಿಕರ ಸಮಸ್ಯೆ ಆಲಿಸಲು ಸಿಮ್ ನೀಡಿದೆ. ಆದರೆ, ಆ ಸಂಖ್ಯೆಗೆ ಜನ ಫೋನ್ ಮಾಡಿದಾಗ ಮೊದಲು `ಈ ನಂ ಸರ್ವಿಸ್ ರದ್ದುಪಡಿಸಲಾಗಿದೆ’ ಎಂಬ ಧ್ವನಿ ಕೇಳಿಸಿದೆ. ಅದಾದ ನಂತರ ಮತ್ತೆ ಮಾಡಿದಾಗ `ದಯವಿಟ್ಟು ಈ ನಂ ರಿಚಾರ್ಜ ಮಾಡಿ’ ಎಂಬ ಉತ್ತರ ಬರುತ್ತಿದೆ. ಬಿಎಸ್‌ಎನ್‌ಎಲ್ ತಾಂತ್ರಿಕ ಸಮಸ್ಯೆಯಿಂದ ಈ ಸಂದೇಶ ಬರುತ್ತಿರುವ ಸಾಧ್ಯತೆ ಹೆಚ್ಚಿದೆ.
ಇದೀಗ ಬಂದ ಸುದ್ದಿ: ಸರ್ಕಾರ ನೀಡಿದ ಮೊಬೈಲ್ ಸಂಖ್ಯೆಗೆ ಸಾರ್ವಜನಿಕರ ಫೋನ್ ಬಾರದ ಬಗ್ಗೆ ಮೊಬೈಲ್‌ಟೈಂ. ಪ್ರಕಟಿಸಿದ ವರದಿಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಸ್ಪಂದಿಸಿದ್ದಾರೆ. ಮೊಬೈಲ್ ಸಮಸ್ಯೆಯ ಬಗ್ಗೆ ಪರಿಶೀಲಿಸುವುದಾಗಿ ಅವರು ಪ್ರತಿಕ್ರಿಯಿಸಿದ್ದಾರೆ.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಜನ ಫೋನ್ ಮಾಡಿದಾಗ ಕೆಲವೊಮ್ಮೆ ಫೋನ್ ರಿಂಗ್ ಆದರೂ ಅದನ್ನು ಉತ್ತರಿಸುವವರಿಲ್ಲ. ಕೆಲವೊಮ್ಮೆ ಫೋನ್ ಕಟ್ ಮಾಡಲಾಗುತ್ತಿದೆ. ಸಾರ್ವಜನಿಕ ಸೇವೆಗಾಗಿ ಸರ್ಕಾರ ಫೋನ್ ನೀಡಿದರೂ ಅದನ್ನು ಸುಸ್ಥಿತಿಯಲ್ಲಿಡದ ಹಾಗೂ ಬಳಕೆ ಮಾಡದ ಬಗ್ಗೆ ಕುಮಟಾದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡಿಗ್ರಸ್ ಆಕ್ರೋಶವ್ಯಕ್ತಪಡಿಸಿದರು. `ಸರ್ಕಾರ ನೀಡಿದ ಸೌಲಭ್ಯ ಸರಿಯಾಗಿ ಬಳಕೆ ಆಗದ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನಿಶ್ ಅವರಿಗೆ ಪತ್ರ ಬರೆಯಲಾಗುತ್ತದೆ’ ಎಂದು ಆಗ್ನೇಲ್ ರೋಡ್ರಿಗಸ್ ಹೇಳಿದರು.
ಜಿ ಪಂ ಅಧಿಕಾರಿ ವರ್ಗಾವಣೆ:
ಉತ್ತರ ಕನ್ನಡ ಜಿಲ್ಲಾ ಪಂಚಾಯತ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಈಶ್ವರ ಕಾಂದು ಅವರ ವರ್ಗಾವಣೆಯಾಗಿದೆ. ಅವರನ್ನು ರಾಯಚೂರಿನ ಜಿಲ್ಲಾ ಪಂಚಾಯತಗೆ ವರ್ಗಾಯಿಸಲಾಗಿದೆ.
Discussion about this post