ಉತ್ತರ ಕನ್ನಡ ಜಿಲ್ಲೆಗೆ ಸಹಕಾರಿ ಸಂಘಗಳೇ ಜೀವಾಳ. ಆದರೆ, ಈಚೆಗೆ ಅನೇಕ ಸಹಕಾರಿ ಸಂಘಗಳು ದಿವಾಳಿ ಅಂಚಿನಲ್ಲಿದೆ.
ಅವ್ಯವಹಾರ, ಅಧಿಕಾರಿ-ಸಿಬ್ಬಂದಿಯ ವೈಯಕ್ತಿಕ ಹಿತಾಸಕ್ತಿ, ಆಡಳಿತ ಮಂಡಳಿಯ ಭ್ರಷ್ಟಾಚಾರ, ಅವೈಜ್ಞಾನಿಕ ನಿರ್ವಹಣೆ, ಅನಧಿಕೃತ ಕಾರ್ಯಚಟುವಟಿಕೆ ಮೊದಲಾದ ಕಾರಣದಿಂದ ಸಹಕಾರಿ ಸಂಘಗಳು ಅವನತಿಯ ಹಾದಿ ಹಿಡಿದಿದೆ. ಸರ್ಕಾರವೇ ನೀಡಿದ ಮಾಹಿತಿ ಪ್ರಕಾರ ಉತ್ತರ ಕನ್ನಡ ಜಿಲ್ಲೆಯ ಒಟ್ಟು 252 ಸಹಕಾರಿ ಸಂಘಗಳು ನಷ್ಟದಲ್ಲಿವೆ!
ಸಹಕಾರ ಸಂಘಗಳ ಇಲಾಖೆಯ ಅಡಿ 984 ಸಹಕಾರಿ ಹಣಕಾಸು ಸಂಸ್ಥೆಗಳು ನೋಂದಣಿಯಾಗಿ ಕಾರ್ಯ ನಿರ್ವಹಿಸುತ್ತಿವೆ. 2023-24 ರ ಆಡಿಟ್ ವರದಿಯಂತೆ ಉತ್ತರ ಕನ್ನಡ ಜಿಲ್ಲೆಯ 732 ಸಂಘಗಳು ಲಾಭ ಕಾಣಿಸಿದೆ. ಕೆಲವು ದಾಖಲೆಗಳಲ್ಲಿ ಮಾತ್ರ ಲಾಭ ಕಾಣಿಸಿದ್ದು, ವಾಸ್ತವ ಸ್ಥಿತಿ ಹಾಗಿಲ್ಲ ಎಂಬುದು ಬಹುತೇಕರಿಗೆ ಅರಗಿಸಿಕೊಳ್ಳಲಾಗದ ಸತ್ಯ.
ನಷ್ಟದಲ್ಲಿರುವ ಸಹಕಾರಿ ಸಂಘಗಳು ಮುಚ್ಚುವ ಹಂತ ತಲುಪಿದೆ. ಕೆಲವು ಸಹಕಾರಿ ಸಂಸ್ಥೆಯ ಅವ್ಯವಹಾರ ಹೊರಬಂದಿದ್ದು, ಜನ ರೊಚ್ಚಿಗೆದ್ದ ಕಾರಣ ಅವು ಶಾಶ್ವತವಾಗಿ ಬಾಗಿಲು ಬಂದ್ ಮಾಡಿಕೊಂಡಿವೆ. ಜನ ತಮ್ಮ ಹಣಕ್ಕಾಗಿ ಈಗಲೂ ಅಲೆದಾಡುತ್ತಿದ್ದಾರೆ. ಇನ್ನಷ್ಟು ಸಹಕಾರಿ ಸಂಘಗಳು ನಷ್ಟದಲ್ಲಿದ್ದರೂ ಅದನ್ನು ಹೊರಗಡೆ ತೋರಿಸಿಕೊಳ್ಳದೇ ವ್ಯವಹಾರ ಮುಂದುವರೆಸಿವೆ.
ಕಾರವಾರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್, ಕಾರವಾರದ ಆಶ್ರಯ ಪತ್ತಿನ ಸಹಕಾರ ಸಂಘ, ಶಿರಸಿಯ ಗೋಳಿ ಸಹಕಾರ ಸಂಘ, ಜೊಯಿಡಾ ಸಹಕಾರಿ ಸಂಘ ಸೇರಿ ಹಲವು ಸಂಸ್ಥೆಗಳಲ್ಲಿ ಹಣಕಾಸಿನ ಅವ್ಯವಹಾರ ಈಗಾಗಲೇ ಬಹಿರಂಗವಾಗಿದೆ. ಇದರೊಂದಿಗೆ ಒಟ್ಟಾರೆ ಜಿಲ್ಲೆಯ 8 ಸಹಕಾರಿ ಸಂಘಗಳಲ್ಲಿ 200 ಕೋಟಿಗೂ ಅಧಿಕ ಅವ್ಯವಹಾರದ ಆರೋಪ ಕೇಳಿ ಬಂದಿದ್ದು, ಸಹಕಾರ ಕಾಯ್ದೆಯ ಅನ್ವಯ 64 ತನಿಖೆ ನಡೆದಿದೆ. ಹೀಗಾಗಿ ಅವೆಲ್ಲವೂ ವ್ಯವಹಾರ ಸ್ಥಗಿತಗೊಳಿಸಿದೆ.
ಕಾರವಾರ ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳೇ ಕಡಿಮೆಯಾದ ಕಾರಣ ಕಾರವಾರ ತಾಲೂಕಿನ ಕೆಲವು ಕೃಷಿ ಸಹಕಾರಿ ಸಂಘಗಳು ನಷ್ಟದ ಹಾದಿ ಹಿಡಿದಿವೆ. ಜಿಲ್ಲೆಯಲ್ಲಿ ಹೈನೋದ್ಯಮ ಕಡಿಮೆಯಾಗುತ್ತಿರುವ ಕಾರಣ ಹಾಲು ಉತ್ಪಾದಕ ಸಹಕಾರಿ ಸಂಘಗಳು ನಷ್ಟದ ಹಾದಿ ಹಿಡಿದಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದಲ್ಲಿ ಹಲವು ಪ್ರಾಥಮಿಕ ಪತ್ತಿನ ಕೃಷಿ ಸಹಕಾರಿ ಸಂಘಗಳು ಘಟ್ಟಿಯಾಗಿ ಬೆಳೆದಿವೆ. ಸಹಕಾರಿ ತತ್ವದಡಿ ಕೃಷಿಕರಿಗೆ ಬೇಕಾದ ಸಾಲ ಸೌಲಭ್ಯ ಒದಗಿಸುವುದು ಮಾತ್ರವಲ್ಲದೇ ಕೃಷಿ ಸಲಕರಣೆಗಳನ್ನು ಒದಗಿಸುವುದು, ಅಗತ್ಯ ತರಬೇತಿ ಮುಂತಾದ ಎಲ್ಲ ವ್ಯವಹಾರಗಳನ್ನು ಸಂಘಗಳು ನಡೆಸಿಕೊಂಡು ಬಂದಿವೆ.
ಸರಿಯಾಗಿ ವ್ಯವಹಾರ ನೋಡಿಕೊಂಡು ಬಂದ ಎಲ್ಲ ಸಹಕಾರ ಸಂಘಗಳೂ ಲಾಭದಲ್ಲಿವೆ. ಆದರೆ, ಅಡ್ಡದಾರಿ ಹಿಡಿದ ಸಹಕಾರಿ ಸಂಘಗಳು ಈವರೆಗೂ ಏಳಿಗೆ ಕಂಡ ನಿದರ್ಶನಗಳಿಲ್ಲ. ಅಲ್ಲೊಂದು-ಇಲ್ಲೊಂದು ಸಂಘಗಳಲ್ಲಿ ನಡೆದ ಅವ್ಯವಹಾರಗಳು ಇಡೀ ಸಹಕಾರ ವ್ಯವಸ್ಥೆಯನ್ನೇ ಅಲ್ಲಾಡಿಸುತ್ತಿವೆ ಎಂಬುದು ಹಿರಿಯ ಸಹಕಾರಿಗಳ ಅಭಿಪ್ರಾಯ.
Discussion about this post