ಮಳೆಗಾಲದ ಹಿನ್ನಲೆ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಕಡೆ ವೃಕ್ಷ ಆಂದೋಲನ ನಡೆಯುತ್ತಿದೆ. ಆದರೆ, ಶಿರಸಿ-ಹಾವೇರಿ ರಸ್ತೆ ಅಗಲೀಕರಣ ವಿಷಯವಾಗಿ ಮರಗಳ ಮಾರಣ ಹೋಮ ನಡೆದಿದೆ. ಗುರುತು ಹಾಕಿದ ಮರಗಳ ಜೊತೆ ಇನ್ನಿತರ ಗಿಡಗಳನ್ನು ಇಲ್ಲಿ ನಾಶ ಮಾಡಲಾಗುತ್ತಿದೆ.
ಸಾಗರಮಾಲಾ ಯೋಜನೆ ಅಡಿ ಶಿರಸಿ ಹಾವೇರಿ ರಸ್ತೆ ವಿಸ್ತರಣಾ ಕೆಲಸ ನಡೆಯುತ್ತಿದೆ. ಇಲ್ಲಿನ 300ರಷ್ಟು ದೊಡ್ಡ ಮರಗಳ ತೆರವಿಗೆ ಅರಣ್ಯ ಇಲಾಖೆಯ ಅನುಮತಿಯೂ ಸಿಕ್ಕಿದೆ. ಹೀಗಾಗಿ ಮಳೆಗಾಲದ ಅವಧಿಯಲ್ಲಿಯೇ ಮರಗಳ ಕಟಾವು ನಡೆಯುತ್ತಿದೆ. ಶಿರಸಿ-ಹಾವೇರಿ ಹೆದ್ದಾರಿಯಲ್ಲಿ ಒಟ್ಟು 74 ಕಿಮೀ ವರೆಗೆ ರಸ್ತೆ ವಿಸ್ತರಣೆ ಹಾಗೂ ಸುಧಾರಣೆಯಾಗಬೇಕಿದೆ. ಅದರಲ್ಲಿ, ಶಿರಸಿ ತಾಲೂಕು ವ್ಯಾಪ್ತಿಯಲ್ಲಿ 22 ಕಿಮೀವರೆಗೆ ರಸ್ತೆ ಕಾಮಗಾರಿ ನಡೆಯಬೇಕಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಡಿ ಅಮ್ಮಾಪುರ ಇನ್‌ಫ್ರಾಸ್ಟ್ರಕ್ಟರ್ ಪ್ರೈವೇಟ್ ಲಿಮಿಟೆಡ್ ಕಂಪನಿ ಕಾಮಗಾರಿ ಗುತ್ತಿಗೆ ನೀಡಿದೆ.
ಸದ್ಯ ಗುತ್ತಿಗೆ ಕಂಪನಿ ಇದೀಗ ಮರಗಳ ಕಟಾವು ಕಾರ್ಯ ಶುರು ಮಾಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕಾಮಗಾರಿಗೆ ಗುತ್ತಿಗೆ ಕೊಟ್ಟ ನಂತರ ರಸ್ತೆ ವಿಸ್ತರಣೆಗಾಗಿ ಗಿಡ ಕತ್ತರಿಸಲು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿದ್ದು, ಆಗ ಈ ರಸ್ತೆ ಅರಣ್ಯ ಇಲಾಖೆ ಜಾಗದಲ್ಲಿದೆ ಎಂಬ ವಿಷಯ ಹೊರಬಿದ್ದಿತು. ಹೀಗಾಗಿ, ಅರಣ್ಯ ಇಲಾಖೆಯು ಕಾಮಗಾರಿಯನ್ನು ಸ್ಥಗಿತಗೊಳಿಸಲು ಸೂಚಿಸಿತ್ತು. ವರ್ಷದ ಹಿಂದೆ ಗುತ್ತಿಗೆದಾರ ಕಂಪನಿಯು ಅರಣ್ಯ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯಲು ಕೇಂದ್ರ ಪರಿಸರ ಮಂತ್ರಾಲಯಕ್ಕೆ ಪ್ರಸ್ತಾವ ಕಳುಹಿಸಿದ್ದು, ಆ ವೇಳೆ ದಾಖಲೆಗಳನ್ನು ಸರಿಯಾಗಿ ಒದಗಿಸದ ಕಾರಣ ಒಪ್ಪಿಗೆ ಸಿಕ್ಕಿರಲಿಲ್ಲ.
ಅದಾದ ನಂತರ ಅರಣ್ಯ ಇಲಾಖೆಯೇ ಸೂಕ್ತ ದಾಖಲೆಗಳನ್ನು ಒದಗಿಸಿದ್ದು, ವರ್ಷಗಳಿಂದ ಮರ ಕಡಿಯುವ ವಿಷಯ ಸರ್ಕಾರ ಮಟ್ಟದಲ್ಲಿ ಚರ್ಚೆಯಾಗಿತ್ತು. ನಂತರ, ಅರಣ್ಯ ಇಲಾಖೆಗೆ ಅನುಮತಿಗಾಗಿ ಸೂಚಿಸಲಾಗಿತ್ತು. ಇದೀಗ ಕಾಮಗಾರಿ ಚಾಲನೆಗೆ ಅನುಮತಿ ದೊರೆತಿದ್ದು, ಗುತ್ತಿಗೆದಾರರು ಗುರುತು ಹಾಕಿರುವ ಮರಗಳನ್ನು ಕತ್ತರಿಸುತ್ತಿದ್ದಾರೆ. ಮಾವಿನಕೊಪ್ಪ, ಎಕ್ಕಂಬಿ ಸಮೀಪ ಚಿಕ್ಕ ಗಿಡಗಳ ಜತೆ ಜಂಬೆ, ಮತ್ತಿ, ಸಳ್ಳಿ, ಅಕೇಶಿಯಾದಂಥ ವಿವಿಧ ಜಾತಿಯ ಮರಗಳನ್ನು ಕಡಿಯಲಾಗಿದೆ. ಉಳಿದ ಮರಗಳನ್ನು ನೆಲಕ್ಕುರುಳಿಸುವ ಸಿದ್ಧತೆ ಜೋರಾಗಿದೆ.
Discussion about this post