ಉದ್ಯೋಗ ಹುಡುಕಾಟದಲ್ಲಿದ್ದ ಹಳಿಯಾಳದ ಸೃಷ್ಠಿ ಜೈನ್ ಅವರ ಬ್ಯಾಂಕ್ ಖಾತೆಗೆ 180ರೂ ಹಣ ಜಮಾ ಆಗಿದ್ದು, ಅದಾದ ನಂತರ ಸೃಷ್ಠಿ ಹಾಗೂ ಅವರ ತಾಯಿಯ ಬ್ಯಾಂಕ್ ಖಾತೆಯಲ್ಲಿದ್ದ 1.91 ಲಕ್ಷ ರೂ ಹಣವನ್ನು ವಂಚಕರು ದೋಚಿದ್ದಾರೆ.
ಹಳಿಯಾಳ ಹವಗಿಯ ಗುತ್ತಿಗೆದಾರ ಅಮೀತ ಜೈನ್ ಅವರ ಪುತ್ರಿ ಸೃಷ್ಠಿ ಜೈನ್ ಉದ್ಯೋಗದ ಹುಡುಕಾಟದಲ್ಲಿದ್ದರು. `ಹೊಟೇಲ್, ರೆಸ್ಟೋರೆಂಟ್ ಕುರಿತು ಗೂಗಲ್’ಲಿ 3 ಸ್ಟಾರ್ ರೇಟಿಂಗ್ ಕೊಟ್ಟರೆ ದಿನಕ್ಕೆ 20 ಸಾವಿರ ದುಡಿಯಲು ಸಾಧ್ಯ’ ಎಂಬ ಸಂದೇಶ ಅವರನ್ನು ಆಕರ್ಷಿಸಿತು. ಆ ಸಂದೇಶ ನೋಡಿದ ಸೃಷ್ಠಿ ಅವರು ವಂಚಕರನ್ನು ಸಂಪರ್ಕಿಸಿ ಅವರು ಹೇಳಿದ ಆಫ್ ಡೌನ್‌ಲೋಡ್ ಮಾಡಿದರು.
ಅದಾದ ನಂತರ ವಿವಿಧ ಹೊಟೇಲ್’ಗಳಿಗೆ ಸ್ಟಾರ್ ಕೊಟ್ಟರು. ಆಗ ಅವರ ಖಾತೆಗೆ 180ರೂ ಹಣ ಜಮಾ ಆಯಿತು. ಇದರಿಂದ ಖುಷಿಯಾದ ಅವರು ಇನ್ನಷ್ಟು ಹೊಟೇಲ್’ಗೆ ಸ್ಟಾರ್ ಒತ್ತಿದರು. `ಇಲ್ಲಿ ದುಡಿದ ಹಣವನ್ನು ಶೇರ್ ಮಾರ್ಕೇಟಿಗೆ ಹಾಕಿ’ ಎಂದು ವಂಚಕರು ಹೇಳಿದ್ದು, ಅದನ್ನು ಸೃಷ್ಠಿ ಅವರು ನಂಬಿದರು. ಶೇರ್ ಮಾರ್ಕೇಟ್ ಹೂಡಿಕೆಗಾಗಿ ತಾಯಿ ಖಾತೆಯಲ್ಲಿದ್ದ ಹಣವನ್ನು ಅವರು ವಂಚಕರಿಗೆ ಟ್ರಾನ್ಸಫರ್ ಮಾಡಿದರು.
800ರೂ, 1ಸಾವಿರ ರೂ, 8 ಸಾವಿರ ರೂ ಹೀಗೆ ಪದೇ ಪದೇ ಹಣಪಡೆದ ವಂಚಕರು ಚಿನ್ನ ನೀಡುವುದಾಗಿ ಆಮಿಷ ಒಡ್ಡಿ ಇನ್ನಷ್ಟು ಸುಲಿಗೆ ಮಾಡಿದರು. ಒಟ್ಟು 1.91 ಲಕ್ಷ ರೂ ಜಮಾ ಆದ ನಂತರ `ನೀವು ಸ್ಟಾರ್ ರೇಟಿಂಗ್ ಕೊಟ್ಟಿದ್ದು ಸರಿಯಾಗಿಲ್ಲ. ಹೀಗಾಗಿ ಹಣ ಮರಳಿ ಸಿಗುವುದಿಲ್ಲ’ ಎಂದು ಕೈ ಎತ್ತಿದರು. ಈ ಎಲ್ಲಾ ವಿಷಯ ಅರಿತ ಗುತ್ತಿಗೆದಾರ ಅಮೀತ ಜೈನ್ ಪೊಲೀಸ್ ದೂರು ನೀಡಿದರು. ಪೊಲೀಸರು ವಂಚಕರ ಹುಡುಕಾಟ ನಡೆಸಿದ್ದಾರೆ.
Discussion about this post