ರೋಹಿತಕುಮಾರ ಹಾಗೂ ರಜತಕುಮಾರ ಎಂಬ ಅಣ್ಣ-ತಮ್ಮ ಸೇರಿ ವಿಶ್ವ ವಿದ್ಯಾಲಯಕ್ಕೆ ಯಾಮಾರಿಸಿದ್ದಾರೆ. ರೋಹಿತ್ ಕುಮಾರ್ ಹೆಸರಿನಲ್ಲಿ ರಂಚತಕುಮಾರ್ ಕಳೆದ ಮೂರು ವರ್ಷಗಳಿಂದ ಕಾಲೇಜಿಗೆ ಬರುತ್ತಿದ್ದರೂ ಯಾರಿಗೂ ಗೊತ್ತಾಗಿಲ್ಲ!
ರೋಹಿತಕುಮಾರ ಹಾಗೂ ರಜತಕುಮಾರ ಅವರು ಭಟ್ಕಳದ ತಲಗೋಡು ಬಳಿಯ ದುರ್ಗಪ್ಪ ನಾಯ್ಕ ಅವರ ಮಕ್ಕಳು. 2022ರ ಸೆ 9ರಂದು ರೋಹಿತಕುಮಾರ್ ಅವರು ಭಟ್ಕಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರವೇಶಪಡೆದಿದ್ದರು. ಆದರೆ, ಒಂದು ದಿನವೂ ಅವರು ಕಾಲೇಜಿಗೆ ಹಾಜರಾಗಿರಲಿಲ್ಲ. ರೋಹಿತಕುಮಾರ ಬದಲಾಗಿ ನಿತ್ಯ ಅವರ ತಮ್ಮ ರಜತಕುಮಾರ ಕಾಲೇಜಿಗೆ ಬರುತ್ತಿದ್ದರು.
ಕಾಲೇಜು ಪ್ರವೇಶಪಡೆದಿದ್ದ ರೋಹಿತಕುಮಾರ ಓದಿನಲ್ಲಿ ಹಿಂದಿದ್ದರು. ವಿದ್ಯೆ ಅವರ ತಲೆಗೆ ಹೋಗುತ್ತಿರಲಿಲ್ಲ. ಹೀಗಾಗಿ ಅವರು ವರ್ಕ ಪ್ರಂ ಹೋಂ ಎಂದು ಯಾವುದೋ ಕೆಲಸ ಮಾಡಿಕೊಂಡಿದ್ದರು. ಅಣ್ಣನ ಬದುಕಿಗೆ ದಾರಿದೀಪ ಆಗುವುದಕ್ಕಾಗಿ ಇಡೀ ಕುಟುಂಬದವರು ಯೋಚಿಸಿ ತಮ್ಮನನ್ನು ಕಾಲೇಜಿಗೆ ಕಳುಹಿಸಿದರು. ಅದರ ಪ್ರಕಾರ ರಜತಕುಮಾರ ಅನುದಿನವೂ ತಪ್ಪಿಸದೇ ಕಾಲೇಜಿಗೆ ಬರುತ್ತಿದ್ದರು. ಈಗಾಗಲೇ ಎಂಬಿಎ ಪದವೀಧರರಾಗಿರುವ ರಜತಕುಮಾರ ಕ್ಲಾಸಿನಲ್ಲಿ ಎಲ್ಲರಿಗಿಂತ ಚುರುಕಾಗಿರುತ್ತಿದ್ದರು.
ಯಾವುದೇ ಪ್ರಶ್ನೆ ಕೇಳಿದರೂ ರಜತಕುಮಾರ ಅತ್ಯಂತ ಸೂಕ್ತ ಉತ್ತರ ಕೊಡುತ್ತಿದ್ದರು. ಇಡೀ ಕಾಲೇಜಿನವರು ರೋಹಿತಕುಮಾರ್ ಹೆಸರಿನಲ್ಲಿ ಕಾಲೇಜಿಗೆ ಬರುತ್ತಿದ್ದ ರಜತಕುಮಾರ ಅವರನ್ನು ಆದರ್ಶ ವಿದ್ಯಾರ್ಥಿ ಎನ್ನುತ್ತಿದ್ದರು. ಎಲ್ಲಾ ಪರೀಕ್ಷೆಯಲ್ಲಿಯೂ ಅತ್ಯುನ್ನತ ಸ್ಥಾನದಲ್ಲಿ ರಜತಕುಮಾರ ಪಾಸಾಗಿದ್ದರು. ಕಳೆದ ಮೂರು ವರ್ಷಗಳಿಂದ ರೋಹಿತಕುಮಾರ ಬದಲು ರಜತಕುಮಾರ್ ಕಾಲೇಜಿಗೆ ಬರುತ್ತಿದ್ದರೂ ಅದನ್ನು ಯಾರಿಗೂ ಕಂಡುಹಿಡಿಯಲು ಆಗಿರಲಿಲ್ಲ. ಅಂತಿಮ ವರ್ಷದ ಪರೀಕ್ಷೆಗೂ ಮುನ್ನ ರಜತಕುಮಾರ್ ತಮ್ಮ ರಹಸ್ಯವನ್ನು ಸ್ನೇಹಿತರ ಬಳಿ ಹೇಳಿದ್ದರು. ಈ ವಿಷಯ ಬಾಯಿಂದ ಬಾಯಿಗೆ ಹರಡಿ ವಿಶ್ವ ವಿದ್ಯಾಲಯದವರೆಗೂ ಮುಟ್ಟಿತು.
ಪರೀಕ್ಷೆ ದಿನಕ್ಕಾಗಿ ಕಾಯುತ್ತಿದ್ದ ವಿಶ್ವ ವಿದ್ಯಾಲಯದ ವಿಚಕ್ಷಣದಳದವರು ಜುಲೈ 9ರಂದು ಪರೀಕ್ಷಾ ಕೇಂದ್ರದ ತಪಾಸಣೆ ನಡೆಸಿದರು. ಆಗ, ಅವರ ಊಹೆಯಂತೆ ರೋಹಿತಕುಮಾರ ಅವರ ಜಾಗದಲ್ಲಿ ರಜತಕುಮಾರ್ ಪರೀಕ್ಷೆ ಬರೆಯುತ್ತಿರುವುದು ಗೊತ್ತಾಯಿತು. ಕೂಡಲೇ ನಕಲಿ ವಿದ್ಯಾರ್ಥಿಯನ್ನು ಅವರು ವಶಕ್ಕೆಪಡೆದರು.
ಅಣ್ಣನ ಹೆಸರಿನಲ್ಲಿ ತಮ್ಮ ಕಾಲೇಜಿಗೆ ಬಂದಿರುವುದು ಹಾಗೂ ಮೂರು ವರ್ಷಗಳ ಕಾಲ ಪರೀಕ್ಷೆ ಎದುರಿಸಿರುವುದು ಆ ಕಾಲೇಜಿನ ಪ್ರಾಚಾರ್ಯರಿಗೂ ಅರಿವಿರಲಿಲ್ಲ. ಉಪನ್ಯಾಸಕರಿಗೆ ಸಹ ಈ ಬಗ್ಗೆ ಮಾಹಿತಿ ಇರಲಿಲ್ಲ. ಹೀಗಾಗಿ ಕಾಲೇಜು ಪ್ರಾಚಾರ್ಯ ನಾಗೇಂದ್ರ ಶೆಟ್ಟಿ ಅವರ ಜೊತೆ ಅಲ್ಲಿದ್ದ ಎಲ್ಲಾ ಉಪನ್ಯಾಸಕರು ಕ್ಷಣಕಾಲ ತಬ್ಬಿಬ್ಬಾದರು. ಕೊನೆಗೆ ಕಾಲೇಜು ಹಾಗೂ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ವಂಚನೆ ಮಾಡಿದ ಬಗ್ಗೆ ಅಣ್ಣ-ತಮ್ಮಂದಿರ ವಿರುದ್ಧ ಅವರು ಭಟ್ಕಳ ಪೊಲೀಸರಿಗೆ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮಾಡುತ್ತಿದ್ದಾರೆ.
Discussion about this post