ಹೃದಯ ರೋಗದಿಂದ ಬಳಲುತ್ತಿದ್ದ 11 ವರ್ಷದ ಮಗುವಿಗೆ ವಿಷ ಕುಡಿಸಿದ್ದ ಪಾಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಯಲ್ಲಾಪುರದ ನಾಗರಾಜ ಪೂಜಾರಿ ಶಿಕ್ಷೆಗೆ ಒಳಗಾದ ವ್ಯಕ್ತಿ.
ಯಲ್ಲಾಪುರ ತಾಲೂಕಿನ ಹೆಮ್ಮಾಡಿಯಲ್ಲಿ ನಾಗರಾಜ ಪೂಜಾರಿ ವಾಸವಾಗಿದ್ದರು. ಅವರಿಗೆ ಮೂವರು ಹೆಣ್ಣು ಮಕ್ಕಳು. ವಂಶೋದ್ಧಾರಕ್ಕೆ ಗಂಡು ಮಗು ಇಲ್ಲ ಎಂಬ ಕಾರಣಕ್ಕೆ ಅವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಪದೇ ಪದೇ ಪೀಡಿಸುತ್ತಿದ್ದರು. ಇದೇ ಕಾರಣದಿಂದ ನಾಗರಾಜ ಪೂಜಾರಿ ಅವರ ಪತ್ನಿ ಮನೆ ಬಿಟ್ಟು ಹೋಗಿದ್ದರು.
ಈ ವೇಳೆ ನಾಗರಾಜ ಪೂಜಾರಿ ಅವರ ಮಕ್ಕಳಾದ ನಯಕನಾ (11) ಹಾಗೂ ಸಹಕನಾ (9) (ಹೆಸರು ಬದಲಿಸಿದೆ) ಅವರನ್ನು ಕಾರವಾರದ ಮಹಿಳಾ ಸಾಂತ್ವಾನ ಕೇಂದ್ರದವರು ವಿಚಾರಣೆಗೆ ಒಳಪಡಿಸಿದ್ದರು. ಆಪ್ತಸಮಾಲೋಚನೆ ವೇಳೆ ಈ ಇಬ್ಬರು ಮಕ್ಕಳು `ಅಮ್ಮ ಬೇಕು’ ಎಂದು ಹೇಳಿದ್ದರು. ಇದರಿಂದ ಸಿಟ್ಟಾದ ನಾಗರಾಜ ಪೂಜಾರಿ 2019ರ ಜನವರಿ 5ರಂದು ಆ ಇಬ್ಬರು ಮಕ್ಕಳ ಮೇಲೆ ಪೊರಕೆಯಿಂದ ಹೊಡೆದಿದ್ದರು.
ಈ ನಡುವೆ ನಯಕನಾ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದು, ಒಂದೆರಡು ಬಾರಿ ನಾಗರಾಜ ಪೂಜಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆಕೆಯ ಚಿಕಿತ್ಸೆಗೆ ಹಣ ವೆಚ್ಚವಾಯಿತು ಎಂದು ಹೇಳಿ ಕಂಠಪೂರ್ತಿ ಕುಡಿಯಲು ಶುರು ಮಾಡಿದ್ದರು. 2019ರ ಜನವರಿ 9ರಂದು ನಯಕನಾ ಅವರಿಗೆ ನಾಗರಾಜ ಪೂಜಾರಿ ಒತ್ತಾಯಪೂರ್ವಕವಾಗಿ ವಿಷ ಕುಡಿಸಿದ್ದರು. ಅದಾದ ನಂತರ ಸಂಬoಧಿಕರ ಮನೆಗೆ ಹೋಗಿ ಬಚ್ಚಿಟ್ಟುಕೊಂಡಿದ್ದರು.
ನಯನಕಾ ಸಾವನಪ್ಪಿದ ವಿಷಯ ಅರಿತು ಬೆಂಗಳೂರಿನಲ್ಲಿ ಗ್ಯಾಸ್ ಕಂಪನಿಯಲ್ಲಿ ಕೆಲಸ ಮಾಡುವ ರಘು ಪೂಜಾರಿ ಅವರು ಪೊಲೀಸ್ ದೂರು ನೀಡಿದ್ದರು. ಆಗಿನ ಯಲ್ಲಾಪುರ ಪಿಐ ಮಂಜುನಾಥ ನಾಯಕ ತನಿಖೆ ನಡೆಸಿದ್ದರು. ಜುಲೈ 11ರಂದು ವಿಚಾರಣೆ ನಡೆಸಿದ ನ್ಯಾಯಾಧೀಶ ಕಿರಣ ಕೇಣಿ ಅವರು ನಾಗರಾಜ ಪೂಜಾರಿಗೆ ಜೀವಾವಧಿ ಶಿಕ್ಷೆ ವಿಧಿಸಿದರು. ಜೊತೆಗೆ 17 ಸಾವಿರ ರೂ ದಂಡವನ್ನು ಪಾವತಿಸುವಂತೆ ಆದೇಶಿಸಿದರು.
ಸಹನಕಾ ಅವರಿಗೆ 10 ಸಾವಿರ ರೂ ಪರಿಹಾರದ ಜೊತೆ ಉಚಿತ ಕಾನೂನು ಪ್ರಾಧಿಕಾರದಿಂದ ನೆರವುಪಡೆಯಲು ನ್ಯಾಯಾಧೀಶರು ಸೂಚಿಸಿದರು. ಈ ಪ್ರಕರಣದಲ್ಲಿ ನಾಗರಾಜ ಪೂಜಾರಿ ವಿರುದ್ಧ ಸಕಾರಿ ವಕೀಲ ರಾಜೇಶ ಮಳಗಿಕರ್ ವಾದ ಮಂಡಿಸಿದ್ದು, ಯಲ್ಲಾಪುರದ ಈಗಿನ ಪಿಐ ರಮೇಶ ಹಾನಾಪುರ ಅವರು ಸಮಯಕ್ಕೆ ಸರಿಯಾಗಿ ಸಾಕ್ಷಿ ಒದಗಿಸುವಲ್ಲಿ ಸಹಕಾರ ಮಾಡಿದರು.
Discussion about this post