ಸರ್ಕಾರಿ ಆಸ್ಪತ್ರೆಗೆ ಹಾಸಿಗೆ ಪೂರೈಸಿದ ಗುತ್ತಿಗೆದಾರನಿಗೆ ಬಿಲ್ ಮೊತ್ತ ಪಾವತಿಸಲು ಲಂಚ ಬೇಡಿ ಲೋಕಾಯುಕ್ತರ ಬಳಿ ಸಿಕ್ಕಿಬಿದ್ದ ಡಾ ಶಿವಾನಂದ ಕುಡ್ತಳಕರ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. `ಡಾ ಶಿವಾನಂದ ಕುಡ್ತಳಕರ್ ಅವರಿಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಿಲ್ಲ’ ಎಂದು ಅವರ ಮಗ ಕಿಶನ್ ಕುಡ್ತರಕರ್ ದೂರಿದ್ದಾರೆ.
`ಲೋಕಾಯುಕ್ತ ದಾಳಿ ಹಿಂದೆ ಕುತಂತ್ರ ನಡೆದಿದೆ. ಅಂಕೋಲಾದ ಮೌಸಿನ್ ಎಂಬುವವರಿoದ ಹಣ ಕೊಡಿಸಿ ಕಾರವಾರದ ರಾಘು ನಾಯ್ಕ ಆಟವಾಡಿದ್ದಾರೆ. ಈ ಹಿಂದೆ ರಾಘು ನಾಯ್ಕ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದ್ದು, ಪ್ರಕರಣ ಅಂತಿಮ ಹಂತದಲ್ಲಿದೆ. ಹೀಗಾಗಿ ಈ ಕುತಂತ್ರ ನಡೆಸಲಾಗಿದೆ’ ಎಂದು ಕಿಶನ್ ಕುಡ್ತರಕರ್ ಹೇಳಿದ್ದಾರೆ.
`ಡಾ ಶಿವಾನಂದ ಅವರು ನ್ಯಾಯಾಂಗ ಬಂಧನದಲ್ಲಿದ್ದಾಗ ಆಕಸ್ಮಿಕವಾಗಿ ಅನಾರೋಗ್ಯಕ್ಕೆ ಒಳಗಾದರು. ಅವರನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟದ ಸಮಸ್ಯೆ ಮತ್ತು ಅಧಿಕ ರಕ್ತದೊತ್ತಡದಿಂದಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಿಟಿ ಸ್ಕ್ಯಾನ್ ಮಾಡಲಾಗಿದ್ದರೂ, ವರದಿ ಬರುವ ಮೊದಲೇ ಐಸಿಯುವಿನಿಂದ ಡಿಸ್ಚಾರ್ಜ್ ಮಾಡಲಾಗಿದೆ. ಇದರಿಂದ ಅವರ ಜೀವಕ್ಕೆ ಅಪಾಯವಾಗುವ ಭೀತಿಯಿದೆ’ ಎಂದು ಕಿಶನ್ ಕುಡ್ತರಕರ್ ಹೇಳಿದರು.
`ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರ ವಿರುದ್ಧ ತನಿಖೆಯಾಗಬೇಕು. ಉತ್ತಮ ಚಿಕಿತ್ಸೆಗಾಗಿ ಡಾ ಶಿವಾನಂದ ಕುಡ್ತಳಕರ್ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಬೇಕು’ ಎಂದು ಒತ್ತಾಯಿಸಿದರು. `ಜಿಲ್ಲಾ ಆಸ್ಪತ್ರೆಯಲ್ಲಿ ಹಣದ ವ್ಯವಹಾರದ ಬಗ್ಗೆ ಸಹಿ ಮಾಡುವ ಯಾವುದೇ ಅಧಿಕಾರ ಡಾ ಶಿವಾನಂದ ಅವರಿಗೆ ಇಲ್ಲ. ಮೌಸಿನ್ಗೆ ನೀಡಬೇಕಾದ ಹಣ ಬಿಡುಗಡೆಗೆ ಸಹಿ ಹಾಕಲು ಹಣದ ಬೇಡಿಕೆ ಇಟ್ಟಿದ್ದಾರೆ ಎಂಬುದು ಸತ್ಯವಲ್ಲ’ ಎಂದು ಸಮರ್ಥಿಸಿಕೊಂಡರು. ಡಾ ಶಿವಾನಂದ ಕುಡ್ತಳಕರ್ ಪರವಾಗಿ ಹೋರಾಟ ನಡೆಸುವುದಾಗಿ ಅವರ ಸಂಬoಧಿಕರಾದ ಸಂತೋಷ ಕುಡ್ತರಕರ್ ಹಾಗೂ ಗಿರಿಜಾನಂದನ್ ಕುಡ್ತರಕರ್ ಹೇಳಿದರು.
Discussion about this post