ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಮಳೆ ಜೋರಾಗಿದೆ. ಪರಿಣಾಮ ಅಲ್ಲಲ್ಲಿ ಹಾನಿ ಸಾಮಾನ್ಯವಾಗಿದೆ.
ಅಂಕೋಲಾ-ಕುಮಟಾ-ಹೊನ್ನಾವರ ಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಅಂಕೋಲಾದ ಅನೇಕ ರಸ್ತೆಗಳು ಮಳೆಯಿಂದ ಮುಳುಗಿದೆ. ಇದರಿಂದ ಜನ ಸಂಚಾರ ಅಸ್ತವ್ಯಸ್ಥವಾಗಿದೆ. ಕುಮಟಾದಲ್ಲಿನ ಮಳೆಯಿಂದ ಜನ ಬೆಚ್ಚಿ ಬಿದ್ದಿದ್ದಾರೆ. ಕುಮಟಾದ ಹೆಗಡೆ ಗ್ರಾಮದ ಚಿಟ್ಟಿಕಂಬಿಯಲ್ಲಿ ತೆಂಗಿನಮರ ಮನೆ ಮೇಲೆ ಮುರಿದು ಬಿದ್ದಿದೆ. ಕುಮಟಾದ ಮೂರೂರು ಗ್ರಾಮದ ಅಳವಳ್ಳಿಯಲ್ಲಿ ಧರೆ ಮೇಲಿದ್ದ ಭಾರೀ ಗಾತ್ರದ ಕಲ್ಬಂಡೆ ಉರುಳಿ ಬಿದ್ದಿದೆ.
ಶುಕ್ರವಾರ ಮಧ್ಯಾಹ್ನ ಶುರುವಾದ ಮಳೆ ಶನಿವಾರ ಸಂಜೆಯಾದರೂ ಮುಗಿದಿಲ್ಲ. ಕೊಂಚವೂ ಬಿಡುವು ನೀಡದೇ ಮಳೆ ಸುರಿಯುತ್ತಿರುವುದರಿಂದ ಅಲ್ಲಲ್ಲಿ ಹಾನಿಯಾಗಿದೆ. ಮಳೆಯೊಂದಿಗೆ ಗಾಳಿಯೂ ಜೋರಾಗಿದ್ದು, ಮರ-ಗಿಡಗಳು ಉರುಳಿ ಬೀಳುತ್ತಿದೆ. ಹೆಗಡೆ ಗ್ರಾಮದ ಚಿಟ್ಟಿಕಂಬಿಯಲ್ಲಿ ರಭಸದ ಗಾಳಿಯ ಹೊಡೆತಕ್ಕೆ ಸಿಕ್ಕ ತೆಂಗಿನಮರ ಮುರಿದು ರಾಘವೇಂದ್ರ ಪರಮೇಶ್ವರ ನಾಯ್ಕ ಅವರ ಮನೆಯ ಮೇಲೆ ಬಿದ್ದಿದೆ. ಪರಿಣಾಮ ಮನೆಯೂ ಮುರಿದಿದೆ. ರಾಘವೇಂದ್ರ ನಾಯ್ಕ ಅವರು 30 ಸಾವಿರ ರೂ ನಷ್ಟ ಅನುಭವಿಸಿದ್ದಾರೆ.
ಮೂರೂರು ಗ್ರಾಮದ ಅಳವಳ್ಳಿಯಲ್ಲಿ ಕೃಷ್ಣ ರಾಮ ನಾಯ್ಕ ಅವರ ಮನೆ ಪಕ್ಕದ ಗುಡ್ಡದ ಮೇಲಿದ್ದ ಕಲ್ಬಂಡೆ ಉರುಳಿದೆ. ಧರೆಯಿಂದ ಭಾರೀ ಪ್ರಮಾಣದ ಬಂಡೆ ಉರುಳಿ ಶೌಚಾಲಯದ ಮೇಲೆ ಬಿದ್ದಿದೆ. ಶೌಚಾಲಯಕ್ಕೆ ಹಾನಿಯಾಗಿದೆ. ಹಾನಿ ಪ್ರದೇಶಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Discussion about this post