ಹಾವು, ಚೇಳು ಸೇರಿ ವಿವಿಧ ವಿಷ ಜಂತುಗಳಿರುವ ಕತ್ತಲೆಯ ಗುಹೆಯೊಳಗೆ ವಿದೇಶಿ ಮಹಿಳೆಯೊಬ್ಬರು ಇಬ್ಬರು ಹೆಣ್ಣು ಮಕ್ಕಳ ಜೊತೆ ವಾಸವಾಗಿದ್ದು, ಗೋಕರ್ಣ ಪೊಲೀಸರು ಹರಸಾಹಸದಿಂದ ಆ ಮಹಿಳೆಯನ್ನು ಗುಹೆಯಿಂದ ಹೊರ ಬರುವಂತೆ ಮಾಡಿದ್ದಾರೆ.
ಆ ಮಹಿಳೆ ಜೊತೆ ಇಬ್ಬರು ಪುಠಾಣಿ ಮಕ್ಕಳು ಹಾಗೂ ಬೆಕ್ಕಿನ ಮರಿಯೊಂದು ಗುಹೆಯಲ್ಲಿ ವಾಸಿಸುತ್ತಿದ್ದು, ಅವರೆಲ್ಲರಿಗೂ ಇದೀಗ ಸರ್ಕಾರವೇ ಆಶ್ರಯ ನೀಡಿದೆ. `ಆಧ್ಯಾತ್ಮದ ಕಡೆ ಆಸಕ್ತಿಯಿರುವ ಕಾರಣ ತಾನು ಗುಹೆ ಸೇರಿ ಧ್ಯಾನ ಮಾಡುತ್ತಿದ್ದೆ’ ಎಂದು ರಷ್ಯಾದ ನೀನಾ ಕುಟಿನಾ ಹೇಳಿಕೆ ನೀಡಿದ್ದಾರೆ. `ಈ ಗುಹೆ ವಾಸಕ್ಕೆ ಯೋಗ್ಯವಲ್ಲ. ಕುಸಿತದ ಆತಂಕವಿದೆ’ ಎಂದು ಪೊಲೀಸರು ಹೇಳಿದರೂ ನಿನಾ ಕುಟಿನಾ ಗುಹೆ ಬಿಟ್ಟು ಬರಲು ಸಿದ್ಧವಿರಲಿಲ್ಲ. ಅಂತೂ-ಇoತೂ ಪೊಲೀಸರು ಹರಸಾಹಸ ನಡೆಸಿ ಶುಕ್ರವಾರ ರಾತ್ರಿ ಆಕೆಯ ಜೊತೆ ಆಕೆಯ ಕುಟುಂಬವನ್ನು ಅಪಾಯದಿಂದ ರಕ್ಷಿಸಿದ್ದಾರೆ.
ಗೋಕರ್ಣದ ರಾಮತೀರ್ಥ ಬಳಿಯ ಪುಟ್ಟ ಗುಹೆಯೊಳಗೆ ನೀನಾ ಕುಟಿನಾ ಬಂದು ಸೇರಿದ್ದರು. ಪ್ರೀಮಾ (6) ಹಾಗೂ ಅಮಾ (4) ಎಂಬ ಮಕ್ಕಳ ಜೊತೆ ಅಲ್ಲಿಯೇ ವಾಸವಾಗಿದ್ದ ಅವರು ಶಿವ ಧ್ಯಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಈ ಭಾಗದಲ್ಲಿ ಕಳೆದ ವರ್ಷ ಗುಡ್ಡ ಕುಸಿತವಾಗಿದ್ದು, ಈ ವರ್ಷದ ಪರಿಸ್ಥಿತಿ ಅಧ್ಯಯನಕ್ಕೆ ಪೊಲೀಸರು ಹೋಗಿದ್ದರು. ಆಗ, ಅಪಾಯಕಾರಿ ಸ್ಥಳದಲ್ಲಿ ಮಹಿಳೆ ವಾಸವಾಗಿರುವುದು ಗಮನಕ್ಕೆ ಬಂದಿತು. ಮಹಿಳಾ ಪೊಲೀಸರ ಸಹಾಯಪಡೆದು ಆ ಮಹಿಳೆ ಹಾಗೂ ಮಕ್ಕಳ ಜೊತೆ ಬೆಕ್ಕನ್ನು ರಕ್ಷಿಸಿದ ಪೊಲೀಸರು ಅವರೆಲ್ಲರನ್ನು ಶಂಕರ ಪ್ರಸಾದ ಫೌಂಡೇಶನ ಆಶ್ರಮಕ್ಕೆ ಸೇರಸಿದರು.
ರಷ್ಯಾ ಮಹಿಳೆ ನೀನಾ ಕುಟಿನಾ ಅವರ ಬಳಿ ವಿಸಾ ಹಾಗೂ ಪಾಸ್‌ಪೋರ್ಟ ಒದಗಿಸುವಂತೆ ಪೊಲೀಸರು ಕೇಳಿದರು ಅದನ್ನು ಕಾಣಿಸಲು ನೀನಾ ಕುಟಿನಾ ಒಪ್ಪಲಿಲ್ಲ. ಕೊನೆಗೆ `ರಾಮತೀರ್ಥ ಬಳಿಯ ಅರಣ್ಯ ಪ್ರದೇಶದ ಬಳಿ ದಾಖಲೆ ಕಳೆದಿದೆ’ ಎಂದು ಅವರು ಹೇಳಿಕೆ ನೀಡಿದ್ದು, ಅರಣ್ಯ ಇಲಾಖೆಯವರ ಜೊತೆ ಸೇರಿ ಪೊಲೀಸರು ಆ ದಾಖಲೆಗಾಗಿ ಹುಡುಕಾಟ ನಡೆಸಿದರು.
ಸಾಕಷ್ಟು ಹುಡುಕಾಟದ ನಂತರ ಪಾಸ್‌ಪೋರ್ಟ ಸಿಕ್ಕಿತು. ಆದರೆ, ಏಪ್ರಿಲ್ ತಿಂಗಳಿನಲ್ಲಿಯೇ ಅದರ ಅವಧಿ ಮುಕ್ತಾಯವಾಗಿತ್ತು. ಗುಹೆಯೊಳಗೆ ಚಿಕ್ಕ ಮೂರ್ತಿಗೆ ಪೂಜೆ ಮಾಡಿರುವುದು ಗಮನಕ್ಕೆ ಬಂದಿತು. ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರಿಗೆ ಪಿಐ ಶ್ರೀಧರ್ ಎಸ್ ಆರ್ ಈ ಎಲ್ಲಾ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಿದ್ದು, ಆ ಮಹಿಳೆಯನ್ನು ವಿದೇಶಕ್ಕೆ ಕಳುಹಿಸುವ ಸಿದ್ಧತೆ ನಡೆದಿದೆ.
ಗುಹೆ ಬದುಕು ಇದೇ ಮೊದಲಲ್ಲ:
ರಾಮತೀರ್ಥ ಬಳಿಯ ಗುಹೆಗಳಲ್ಲಿ ವಿದೇಶಿಗರ ವಾಸ ಇದೇ ಮೊದಲಲ್ಲ. ಈ ಹಿಂದೆ ಸಹ ರಷ್ಯಾ ಹಾಗೂ ಫ್ರೆಂಜ್ ಪ್ರಜೆಗಳು ಇಲ್ಲಿ ವಾಸವಿದ್ದ ಉದಾಹರಣೆಗಳಿವೆ. ಬೇಸಿಗೆ ಅವಧಿಯಲ್ಲಿ ಅನೇಕರು ಇಲ್ಲಿ ಆಗಮಿಸಿ ಗುಹೆಗಳಲ್ಲಿ ಬದುಕುತ್ತಾರೆ. ಬೆಲೇಖಾನ ಹತ್ತಿರದ ಬ್ರಹ್ಮಕಾನ ಬೆಟ್ಟಗಳಲ್ಲಿ ಟೆಂಟ್ ಹಾಕಿ ವಾಸಿಸುತ್ತಾರೆ. ಉತ್ತರ ಭಾರತದಿಂದ ಬರುವ ಬಾಬಾಗಳು ಸಹ ಇಂಥ ಗುಹೆಗಳಲ್ಲಿ ವಾಸ ಮಾಡುತ್ತಾರೆ.
Discussion about this post