ಕಾರವಾರದ ಪತ್ರಿಕಾ ಭವನದ ಎದುರು ಬಂದ ಯುವಕನೊಬ್ಬ ತನ್ನ ಎರಡು ಕೈ ಕೊಯ್ದುಕೊಂಡು ರಂಪಾಟ ನಡೆಸಿದ್ದು, ಅಲ್ಲಿದ್ದ ಜನ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಪೊಲೀಸರ ಕಿರುಕುಳಕ್ಕೆ ಬೇಸತ್ತು ಈ ಕೃತ್ಯ ನಡೆಸಿರುವುದಾಗಿ ಆತ್ಮಹತ್ಯೆಗೆ ಯತ್ನಿಸಿದ ಕಲ್ಪೇಶ್ ಉಳ್ವೇಕರ್ ಹೇಳಿಕೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲಾಧಿಕಾರಿ ಕಚೇರಿ ಅಂಚಿನಲ್ಲಿರುವ ಪತ್ರಿಕಾ ಭವನಕ್ಕೆ ಶನಿವಾರ ಸಂಜೆ ಕಲ್ಪೇಶ್ ಉಳ್ವೇಕರ್ ಆಗಮಿಸಿದ್ದರು. `ಪೊಲೀಸರು ನನಗೆ ಕಿರುಕುಳ ನೀಡುತ್ತಿದ್ದಾರೆ. ನನಗೆ ನ್ಯಾಯ ಕೊಡುವವರೇ ಇಲ್ಲ’ ಎಂದು ಅವರು ಕೂಗಾಡಿದರು. ಅವರ ಪ್ರತಿಭಟನೆಯ ಮಾರ್ಗ ಸರಿಯಿಲ್ಲದ ಕಾರಣ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ.
ಹೀಗಾಗಿ ಕಿಸೆಯಲ್ಲಿದ್ದ ಬ್ಲೇಡು ತೆಗೆದ ಕಲ್ಪೇಶ್ ಉಳ್ವೇಕರ್ ತಮ್ಮ ಎರಡು ಕೈಗಳನ್ನು ಕೊಯ್ದುಕೊಂಡರು. ಅದಾದ ನಂತರ ಬ್ಲೇಡನ್ನು ಕುತ್ತಿಗೆಯ ಬಳಿ ತೆಗೆದುಕೊಂಡು ಹೋಗಿದ್ದು, ಅಲ್ಲಿದ್ದ ಜನ ಬ್ಲೇಡು ಕಸಿದರು. ನಂತರ ಪೊಲೀಸರಿಗೆ ಫೋನ್ ಮಾಡಿದರು. ಪೊಲೀಸರು ಆಗಮಿಸಿ ಕಲ್ಪೇಶ್ ಉಳ್ವೇಕರ್ ಅವರನ್ನು ಆಸ್ಪತ್ರೆಗೆ ಸಾಗಿಸಿದರು.
`ಕಲ್ಪೇಶ್ ಉಳ್ವೇಕರ್ ವಿರುದ್ಧ ಕಾರವಾರ ನಗರ ಠಾಣೆಯಲ್ಲಿ ಕೆಲವು ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ಅವರ ಚಲನವಲಮಗಳ ಮೇಲೆ ನಿಗಾವಿರಿಸಿದ್ದರು. ಪೊಲೀಸ್ ಸಿಬ್ಬಂದಿ ಕಲ್ಪೇಶ್ ಅವರ ಮನೆಗೆ ಆಗಾಗ ಭೇಟಿ ನೀಡಿ ವಿಚಾರಿಸುತ್ತಿದ್ದರು. ಇದನ್ನು ಕಿರುಕುಳ ಎಂದು ಭಾವಿಸಿ ಅವರು ಕೈ ಕೊಯ್ದುಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.
Discussion about this post