ಅನಾರೋಗ್ಯದ ಕಾರಣ ತವರು ಮನೆಗೆ ಹೋಗಿದ್ದ ರಂಜಿತಾ ಅವರು ತಮ್ಮ ಗಂಡನಿಗೆ ಫೋನ್ ಮಾಡಿ ವಿವಾಹ ವಾರ್ಷಿಕೋತ್ಸವದ ಶುಭಾಶಯ ಹೇಳಿದ್ದರು. ಅದಾದ ನಂತರ ಅವರ ಫೋನ್ ಸ್ವಿಚ್ ಆಫ್ ಆಗಿದ್ದು, ಆರು ತಿಂಗಳು ಕಳೆದರೂ ರಂಜತಾ ಅವರ ಪತಿ ವಿವೇಕ್ ಅವರ ಫೋನ್ ಸ್ವಿಚ್ ಆನ್ ಆಗಿಲ್ಲ. ವಿವೇಕ್ ಸಹ ಯಾರಿಗೂ ಸಿಕ್ಕಿಲ್ಲ.
ಶಿರಸಿ ಕೋಟೆಗಲ್ಲಿಯ ವಿವೇಕ ಬೋವಿ ಅವರು ಹೊಟೇಲ್ ಕೆಲಸ ಮಾಡಿಕೊಂಡಿದ್ದರು. ಕೃಷ್ಣ ಕ್ಯಾಂಟಿನ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ವಿವಿಧ ಕಾರಣಗಳಿಂದ ವಿವೇಕ ಬೋವಿ ಅವರು ವಿವಿಧ ಕಡೆ ಸಾಲ ಮಾಡಿಕೊಂಡಿದ್ದರು. ಈ ನಡುವೆ 2024ರ ಜುಲೈ ತಿಂಗಳಿನಲ್ಲಿ ರಂಜಿತಾ ಬೋವಿ ಅವರು ಅನಾರೋಗ್ಯಕ್ಕೆ ಒಳಗಾದರು. ಹೀಗಾಗಿ ಅವರು ಶಿವಮೊಗ್ಗದ ತವರುಮನೆಗೆ ಹೋಗಿ ವಿಶ್ರಾಂತಿಪಡೆಯುತ್ತಿದ್ದರು.
ವಿವೇಕ್ ಬೋವಿ ಅವರಿಗೆ ನಿತ್ಯವೂ ಅವರು ಫೋನ್ ಮಾಡುತ್ತಿದ್ದರು. 2024ರ ಅಗಸ್ಟ್ ತಿಂಗಳಿನಲ್ಲಿ ಹಣಕಾಸಿನ ಸಮಸ್ಯೆ ಬಗ್ಗೆ ವಿವೇಕ್ ಬೋವಿ ಅವರು ಹೇಳಿಕೊಂಡಿದ್ದು, ಶಿವಮೊಗ್ಗದಿಂದ ಶಿರಸಿಗೆ ಬಂದ ರಂಜತಾ ಬೋವಿ ಅವರು ಎಕ್ಸಿಸ್ ಬ್ಯಾಂಕಿನಲ್ಲಿ 40 ಸಾವಿರ ರೂ ಸಾಲ ಮಾಡಿದರು. ಆ ಹಣವನ್ನು ಪತಿಯ ಕೈಗೆ ಕೊಟ್ಟರು.
ಇದಾದ ನಂತರ 2024ರ ಡಿಸೆಂಬರ್ 1ರಂದು ವಿವೇಕ್ ಬೋವಿ ಅವರಿಗೆ ರಂಜತಾ ಕೊನೆಯದಾಗಿ ಫೋನ್ ಮಾಡಿದರು. ವಿವಾಹ ವಾರ್ಷಿಕೋತ್ಸವದ ಶುಭಾಶಯ ಕೋರಿದರು. ಅದಾದ 10 ನಿಮಿಷದಲ್ಲಿ ಮತ್ತೆ ಫೋನ್ ಮಾಡಿದಾಗ ಸ್ವಿಚ್ ಆಫ್ ಬಂದಿತು. 2025ರ ಜುಲೈ 7ರವರೆಗೂ ಅವರ ಫೋನ್ ಸ್ವಿಚ್ ಆಫ್ ಆಗಿಯೇ ಇತ್ತು. ಆರೋಗ್ಯ ಚೇತರಿಕೆ ನಂತರ ಶಿರಸಿಗೆ ಬಂದ ರಂಜಿತಾ ಅವರು ತಮ್ಮ ಪತಿಯ ಬಗ್ಗೆ ವಿಚಾರಿಸಿದರು.
2024ರ ಡಿಸೆಂಬರ್ 21ರ ರಾತ್ರಿ ಹೊಟೇಲ್ ಕೆಲಸ ಮುಗಿಸಿ ಮನೆಗೆ ಬಂದ ವಿವೇಕ್ ಬೋವಿ ಅವರು ಮರುದಿನ ಬೆಳಗ್ಗೆ ಎಲ್ಲಿಗೋ ಹೋದರು. ಮರಳಿ ಅವರು ಬರಲಿಲ್ಲ’ ಎಂದು ಅಕ್ಕ-ಪಕ್ಕದವರು ಹೇಳಿದರು. ಯೂನಿಯನ್, ಸುವರ್ಣ, ಅಂಬೇಡ್ಕರ್, ರೇಣುಕಾಂಬಾ ಕೋ ಆಪರೇಟಿವ್, ನವೋದಯ ಬ್ಯಾಂಕಿನ ಸಿಬ್ಬಂದಿ ಸಾಲ ವಸೂಲಾತಿಗೆ ಪದೇ ಪದೇ ಮನೆಗೆ ಬರುತ್ತಿದ್ದು, ಅದರಿಂದ ವಿವೇಕ್ ಬೋವಿ ನೊಂದಿದ್ದರು. ಸಾಲ ಹೆಚ್ಚಾದ ಕಾರಣ ಮನೆ ಬಿಟ್ಟು ಹೋಗಿರುವ ಸಾಧ್ಯತೆಯಿದೆ ಎಂದು ರಂಜತಾ ಬೋವಿ ಅವರು ಅಂದಾಜಿಸಿದರು.
ತಮ್ಮ ಪತಿಯನ್ನು ಹುಡುಕಿಕೊಡಿ ಎಂದು ಅವರು ಶಿರಸಿ ನಗರ ಠಾಣೆ ಪೊಲೀಸರಿಗೆ ಮನವಿ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಹುಡುಕಾಟ ಶುರು ಮಾಡಿದ್ದಾರೆ.
Discussion about this post