ಭಟ್ಕಳ ನಗರ ಸ್ಪೋಟಿಸುವುದಾಗಿ ಬೆದರಿಕೆ ಒಡ್ಡಿದ್ದವರನ್ನು ಪೊಲೀಸರು ಪತ್ತೆ ಮಾಡಿದ್ದು, ಇಬ್ಬರನ್ನು ವಶಕ್ಕೆಪಡೆದಿದ್ದಾರೆ.
24 ತಾಸಿನ ಒಳಗೆ ಭಟ್ಕಳವನ್ನು ಸ್ಪೋಟಿಸುವುದಾಗಿ ಪೊಲೀಸ್ ಠಾಣೆಗೆ ಇ-ಮೇಲ್ ಸಂದೇಶ ಬಂದಿತ್ತು. ಈ ಹಿನ್ನಲೆ ಪೊಲೀಸರು ಎಲ್ಲಾ ಕಡೆ ತಪಾಸಣೆ ನಡೆಸಿದ್ದರು. ಆದರೆ, ಎಲ್ಲಿಯೂ ಬಾಂಬ್ ಸಿಕ್ಕಿರಲಿಲ್ಲ. ತಮಿಳುನಾಡು ಮೂಲದ ಕಣ್ಣನ್ ಎಂಬಾತ ಇ-ಮೇಲ್ ರವಾನಿಸಿರುವುದು ಗೊತ್ತಾಗಿತ್ತು.
ಕಣ್ಣನ್’ನನ್ನು ಪೊಲೀಸರು ವಶಕ್ಕೆಪಡೆದು ವಿಚಾರಣೆ ನಡೆಸಿದಾಗ ಕಣ್ಣನ್ ಮೊಬೈಲಿನಿಂದ ಮತ್ತೊಬ್ಬ ವ್ಯಕ್ತಿ ಈ ಕೃತ್ಯ ಎಸಗಿರುವುದು ಗಮನಕ್ಕೆ ಬಂದಿತು. ಕಣ್ಣನ್ ಮೊಬೈಲನ್ನು ಆತ ಹೇಗೆ ಬಳಸಿದ? ಎಂಬುದರ ಕುರಿತು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕಣ್ಣನ್ ಮೊಬೈಲಿನಿಂದ ಇ-ಮೇಲ್ ರವಾನಿಸಿದ ವ್ಯಕ್ತಿ ಸದ್ಯ ಮೈಸೂರಿನಲ್ಲಿರುವುದು ಗೊತ್ತಾಗಿದೆ. ಮೈಸೂರಿನ ಪೊಲೀಸರು ಆತನನ್ನು ವಿಚಾರಣೆಗೊಳಪಡಿಸಿದ್ದಾರೆ.
ಈ ಹಿಂದೆಯೂ ಆತ ವಿವಿಧ ಕಡೆ ಬಾಂಬ್ ಬೆದರಿಕೆ ಒಡ್ಡಿರುವುದು ವಿಚಾರಣೆ ವೇಳೆ ಗೊತ್ತಾಗಿದೆ. ಕರ್ನಾಟಕ ಪೊಲೀಸರ ಜೊತೆ ಕೇರಳ ಪೊಲೀಸರು ಆತನನ್ನು ಹಿಡಿಯುವಲ್ಲಿ ಶ್ರಮಿಸಿದ್ದಾರೆ.
Discussion about this post