ಹಪ್ತಾ ವಸೂಲಿ, ದಾದಾಗಿರಿ, ದರೋಡೆ ಸೇರಿ ಹಲವು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ದಾಂಡೇಲಿಯ ರೌಡಿ ಶೀಟರ್ ಪ್ರವೀಣ ಸುಧೀರ ಮೇಲೆ ಪೊಲೀಸರು ಗುಂಡಿನ ದಾಳಿ ಮಾಡಿದ್ದಾರೆ.
37 ವರ್ಷದ ಪ್ರವೀಣ ಸುಧೀರ್ ತುಕಾರಾಮ ಎಂಬ ಹೆಸರಿನಿಂದಲೂ ಚಿರಪರಿಚಿತರು. ಪೊಲೀಸ್ ವರದಿ ಪ್ರಕಾರ ಕಳೆದ 10 ವರ್ಷಗಳಿಂದ ಅವರು ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿದ್ದರು. ರಾಮನಗರದ ರಾಮಲಿಂಗಗಲ್ಲಿಯಲ್ಲಿ ವಾಸವಿದ್ದ ಪ್ರವೀಣ ಸುಧೀರ್ 2008ರಲ್ಲಿ ಮೊದಲ ಬಾರಿ ಹೊಡೆದಾಟ ನಡೆಸಿ, ಪೊಲೀಸ್ ಠಾಣೆ ಮೆಟ್ಟಿಲೇರಿದರು. ಅದಾದ ನಂತರ ಸರ್ಕಾರಿ ನೌಕರರ ಮೇಲೆ ಹಲ್ಲೆ, ಕೊಲೆ ಯತ್ನ, ಜೀವ ಬೆದರಿಕೆ ಸೇರಿ ಅನೇಕ ಅಪರಾಧ ಕೃತ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅದಾಗಿಯೂ, ಅನೇಕರು ಪ್ರವೀಣ ಸುಧೀರ್ ಮೇಲಿನ ಹೆದರಿಕೆಯಿಂದ ಅವರ ವಿರುದ್ಧ ಪೊಲೀಸ್ ದೂರು ನೀಡುತ್ತಿರಲಿಲ್ಲ.
ಜನರಲ್ಲಿರುವ ಭಯವನ್ನು ಬಂಡವಾಳವನ್ನಾಗಿಸಿಕೊAಡ ಪ್ರವೀಣ ಸುಧೀರ್ ತಮ್ಮ ಅಪರಾಧ ಕೃತ್ಯಗಳ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿದರು. 2019ರಲ್ಲಿ ರಸ್ತೆ ಮೇಲೆ ಓಡಾಡುವ ಲಾರಿಗಳನ್ನು ಅಡ್ಡಗಟ್ಟಿ ಹಪ್ತಾ ಕೇಳಿದ್ದರು. ಈ ಪ್ರಕರಣದಲ್ಲಿ ವಿಚಾರಣೆಗೆ ಬಂದಿದ್ದ ಪೋಲೀಸ್ ಅಧಿಕಾರಿ ಪ್ರಕಾಶ ಭಟ್ಟ ಎಂಬಾತರ ಯುನಿಪಾರಂ ಹರಿದು, ಅವರ ಮೇಲೆ ಕೈ ಮಾಡಿದ್ದರು.
ಅದಕ್ಕೂ ಮುನ್ನ ರಾಮನಗರದ ಸರ್ಕಾರಿ ಸರಾಯಿ ಅಂಗಡಿಗೆ ನುಗ್ಗಿ ಪ್ರವೀಣ ಸುಧೀರ್ ರಂಪಾಟ ಮಾಡಿದ್ದರು. ಅಲ್ಲಿದ್ದ ರಾಜೇಶ ಎಂಬಾತರನ್ನು ಹಿಗ್ಗಾಮುಗ್ಗ ಥಳಿಸಿದ್ದರು. ಮದ್ಯ ಮಾರಾಟ ಮಳಿಗೆಯವರು ಆಧಾರ್ ಕಾರ್ಡ ಕಾಣಿಸುವಂತೆ ಕೇಳಿದ ಕಾರಣ ಅಲ್ಲಿದ್ದ ನೌಕರರನ್ನು ಬಡಿಗೆಯಿಂದ ಬಡಿದಿದ್ದರು. ಇನ್ನಷ್ಟು ಜನರ ಜೊತೆ ಮಳಿಗೆಗೆ ನುಗ್ಗಿ ದಾಂಧಲೆ ಮಾಡಿದ್ದರು.
ಮತ್ತೊಮ್ಮೆ ಪ್ರವೀಣ ಸುಧೀರ್ ಜಗಳವಾಡುತ್ತಿರುವುದನ್ನು ನೋಡಿದ ವಿವೇಕ್ ಸಾಪಗಾಂವ್ಕರ್ ಎಂಬಾತರು ಜಗಳ ಬಿಡಿಸಲು ಹೋಗಿದ್ದರು. ಜಗಳ ಬಿಡಿಸಲು ಬಂದ ವಿವೇಕ್ ಅವರ ವಿರುದ್ಧವೇ ಪ್ರವೀಣ ಸುಧೀರ್ ತಿರುಗಿಬಿದ್ದು ಹಲ್ಲೆ ಮಾಡಿದ್ದರು. ರಾಡಿನಿಂದ ತಲೆಗೆ ಏಟು ಬಿದ್ದ ಪರಿಣಾಮ ವೀವೆಕ ಸಾಪಗಾಂವ್ಕರ್ ಅವರು ಆಸ್ಪತ್ರೆ ಸೇರಿದ್ದರು.
ರಾಮನಗರದ ಕೃಷ್ಣಾಗಲ್ಲಿಯಲ್ಲಿ ವಾಸವಾಗಿದ್ದ ಸದಾನಂದ ಮಿರಾಶಿ ಅವರನ್ನು ಪ್ರವೀಣ ಸುಧೀರ್ ಬೆದರಿಸಿ ಹಲ್ಲೆ ಮಾಡಿದ್ದರು. ರಿಕ್ಷಾಗಾಗಿ ಕಾಯುತ್ತಿದ್ದ ಸದಾನಂದ ಮಿರಾಶಿ ಅವರನ್ನು ನಿಂದಿಸಿ ಹೊಡೆದಿದ್ದರು. ಮತ್ತೊಮ್ಮೆ ಸಾಲದ ವಿಷಯವಾಗಿ ಮಾತನಾಡಲು ಶಾಂತಿನಾಥ ಬೋರೆಗಾಂವ್ ಅವರನ್ನು ಕಾಡು ಪ್ರದೇಶಕ್ಕೆ ಕರೆದೊಯ್ದು ಅವರ ಬಳಿಯಿದ್ದ ಹಣ-ಮೊಬೈಲ್ ದೋಚಿದ್ದರು. ಅನೇಕ ಪ್ರಕರಣಗಳನ್ನು ಪ್ರವೀಣ ಸುಧೀರ್ ರಾಜಿ ಮೂಲಕ ಬಗೆಹರಿಸಿಕೊಂಡಿದ್ದರು. ಇನ್ನು ಕೆಲವು ಪ್ರಕರಣಗಳಲ್ಲಿ ಸಾಕ್ಷಿ ಕೊರತೆಯಿಂದ ಬಿಡುಗಡೆ ಆಗಿದ್ದರು. ಸಾಕ್ಷಿಗಳನ್ನು ಹೆದರಿಸುವ
ಬಗ್ಗೆಯೂ ಪೊಲೀಸ್ ದಾಖಲೆಗಳಲ್ಲಿ ಉಲ್ಲೇಖವಿದೆ.
ಈ ಎಲ್ಲಾ ಹಿನ್ನಲೆ ಪ್ರವೀಣ ಸುಧೀರ್ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಪೊಲೀಸರು ಹೆದರುತ್ತಿದ್ದರು. ಸಾಕಷ್ಟು ಪೊಲೀಸರು ಪ್ರವೀಣ ಸುಧೀರ್’ರನ್ನು ಎದುರುಹಾಕಿಕೊಂಡು ಕೆಲಸ ಮಾಡಿದ್ದರೂ ಅಂಥ ಪೊಲೀಸರನ್ನು ಪ್ರವೀಣ ಸುಧೀರ್ ಕಾಡಿಸುತ್ತಿದ್ದರು. ಅನೇಕ ಪ್ರಕರಣಗಳಿದ್ದರೂ ಪ್ರವೀಣ ಸುಧೀರ್ ರಾಜಾರೋಷವಾಗಿ ಬದುಕಿದ್ದು, ಇದೀಗ ಯಲ್ಲಾಪುರದ ಕಣ್ಣಿಗೇರಿ ಬಳಿ ಪೊಲೀಸರ ವಿರುದ್ಧ ತಿರುಗಿ ಬಿದ್ದಿದ್ದು ಪ್ರವೀಣ ಸುಧೀರ್ ಗೆ ಮುಳುವಾಯಿತು.
ಭಾಗವತಿ ಕಾಡಿನಲ್ಲಿ ಅವಿತಿರುವ ಬಗ್ಗೆ ಮಾಹಿತಿ ಆಧರಿಸಿ ಪೊಲೀಸರು ಅಲ್ಲಿ ಕಾರ್ಯಾಚರಣೆ ನಡೆಸಿದರು. ಕಣ್ಣಿಗೇರಿ ಬಳಿಯ ಕಾಡಿನಲ್ಲಿ ಹುಡುಕಾಟ ನಡೆಸಿದಾಗ ಪ್ರವೀಣ ಸುಧೀರ್ ಸಿಕ್ಕಿ ಬಿದ್ದರು. ಆಗ ಪೊಲೀಸರು ಶರಣಾಗುವಂತೆ ಸೂಚಿಸಿದರು. ಆದರೆ, ಪ್ರವೀಣ ಸುಧೀರ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದರು. ಆಗ ಪೊಲೀಸರು ಗುಂಡಿನ ದಾಳಿ ನಡೆಸಿ ಪ್ರವೀಣ ಸುಧೀರರನ್ನು ಬಂಧಿಸಿದರು.
ಬಂಧನಕ್ಕೂ ಮುನ್ನ ಪೊಲೀಸರು ಹಾಗೂ ಪ್ರವೀಣ ನಡುವೆ ಮಾರಾಮಾರಿ ನಡೆದಿದ್ದು, ಮೂವರು ಪೊಲೀಸರು ಗಾಯಗೊಂಡರು. ಜೊಯಿಡಾ ಪೊಲೀಸ್ ಸಿಬ್ಬಂದಿ ಜಾಫರ್ ಅದಗುಂಜಿ, ಅಸ್ಲಾಂ ಘಟ್ಟದ, ಪಿಎಸ್‌ಐ ಮಹೇಂತಶ ನಾಯ್ಕ ಗಾಯಗೊಂಡಿದ್ದಾರೆ. ಗಾಯಗೊಂಡವರು ಯಲ್ಲಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
Discussion about this post