ಶಿರಸಿಯಲ್ಲಿ ಜಲ ಸಂರಕ್ಷಣೆಗಾಗಿ ವಿವಿಧ ಯೋಜನೆ ರೂಪಿಸಿದ ಜೀವಜಲ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರು ಇದೀಗ ಸ್ಮಶಾನ ಸ್ವಚ್ಛತೆಯ ಕೆಲಸ ಶುರು ಮಾಡಿದ್ದಾರೆ. ಅದರ ಫಲವಾಗಿ ಚಿಪಗಿಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿನ ಗಿಡ-ಗಂಟಿಗಳ ತೆರವು ಕಾರ್ಯಾಚರಣೆ ನಡೆದಿದೆ.
ಹಿಂದೂ ರುದ್ರಭೂಮಿಯಲ್ಲಿ ಅಪಾರ ಪ್ರಮಾಣದಲ್ಲಿ ಗಿಡ-ಗಂಟಿಗಳು ಬೆಳೆದಿದ್ದವು. ಇದರಿಂದ ಸ್ಮಶಾನ ಸ್ವಚ್ಛತೆ ಸವಾಲಾಗಿತ್ತು. ಈ ಬಗ್ಗೆ ಪ್ರಮುಖರಾದ ನವೀನ ಶೆಟ್ಟಿ ಹಾಗೂ ಇನ್ನಿತರರು ಶ್ರೀನಿವಾಸ ಹೆಬ್ಬಾರ್ ಅವರ ಗಮನಕ್ಕೆ ತಂದಿದ್ದರು. ಕೂಡಲೇ ಸ್ಮಶಾನ ಶುದ್ದಿಗೆ ಅಗತ್ಯ ಕ್ರಮ ಜರುಗಿಸುವಂತೆ ಶ್ರೀನಿವಾಸ ಹೆಬ್ಬಾರ್ ಅವರು ಸೂಚಿಸಿದ್ದು, ಅದರ ಪ್ರಕಾರ ರುದ್ರಭೂಮಿಯಲ್ಲಿ ಬೆಳೆದಿದ್ದ ಗಿಡ-ಗಂಟಿಗಳನ್ನು ತೆರವು ಮಾಡಲಾಯಿತು.
`ಮರಳಿ ಮಣ್ಣಿಗೆ ಟ್ರಸ್ಟ್’ನ ಸ್ವಯಂ ಸೇವಕರು ಈ ಕಾರ್ಯದಲ್ಲಿ ಶ್ರಮಿಸಿದರು. `ಸಮಾಜಮುಖಿ ಕಾರ್ಯಗಳಲ್ಲಿ ಸದಾ ಒಟ್ಟಿಗೆ ದುಡಿಯೋಣ’ ಎಂದು ಅಲ್ಲಿದ್ದವರು ಕರೆ ನೀಡಿದರು. `ಈ ಹಿಂದೂ ರುದ್ರಭೂಮಿ ಬಹಳ ಪ್ರಾಮುಖ್ಯತೆಹೊಂದಿದೆ. ಹೀಗಾಗಿ ಇಲ್ಲಿ ಇನ್ನೂ ಅನೇಕ ಅಭಿವೃದ್ಧಿ ಕಾಮಗಾರಿಗಳ ಅಗತ್ಯವಿದ್ದು, ಎಲ್ಲರೂ ಸೇರಿ ಶ್ರಮಿಸೋಣ’ ಎಂದು ಮರಳಿ ಮಣ್ಣಿಗೆ ಟ್ರಸ್ಟ್’ನ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಅವರು ಕರೆ ನೀಡಿದರು.
Discussion about this post