ದಟ್ಟ ಕಾಡಿನ ನಡುವೆ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಅನೇಕ ವರ್ಷಗಳಿಂದ ಗೃಹ ಬಂಧನದಲ್ಲಿದ್ದ ವಿನಾಯಕ ಸೋನಶೇಟ್ ಎಂಬಾತರಿಗೆ ಮಂಗಳವಾರ ಈ ಬಂಧನದಿ0ದ ಬಿಡುಗಡೆಯಾಗಿದೆ. ಅಂಚೆ ಇಲಾಖೆ ನೌಕರರಾಗಿದ್ದ ವಿನಾಯಕ ಅವರನ್ನು ಮಾನಸಿಕ ಅಸ್ವಸ್ಥ ಎಂದು ಹಣೆಪಟ್ಟಿ ಕಟ್ಟಿ ಅವರ ಕುಟುಂಬದವರೇ ಕೂಡಿ ಹಾಕಿದ್ದರು.
10 ವರ್ಷಗಳ ಹಿಂದೆ ದಾಂಡೇಲಿಯ ಆಲೂರಿನಲ್ಲಿ ಕಬ್ಬಿನಗದ್ದೆಗೆ ಬೆಂಕಿ ಬಿದ್ದಿತ್ತು. ಗದ್ದೆಗೆ ಬೆಂಕಿ ಹಚ್ಚಿದ ಆರೋಪ ವಿನಾಯಕ ಸೋನಶೇಟ್ ಅವರ ಮೇಲಿದ್ದು, ಆ ದಿನದಿಂದಲೇ ಅವರ ಕಾಲಿಗೆ ಸರಪಳಿ ಬಿಗಿದು ಕೋಣೆಯಲ್ಲಿ ಕೂಡಿಹಾಕಲಾಗಿತ್ತು. ಸರಿಸುಮಾರು 25 ಎಕರೆ ಭೂಮಿಯಿದ್ದರೂ ಅದನ್ನು ಅನುಭವಿಸುವ ಯೋಗ ವಿನಾಯಕ ಅವರ ಪಾಲಿಗಿರಲಿಲ್ಲ. ಕೋಣೆಯಲ್ಲಿ ಕೂಡಿಹಾಕಿದ್ದರಿಂದಲೇ ಅವರು ಮಾನಸಿಕವಾಗಿ ಕುಗ್ಗಿದ್ದರು.
ಅತ್ಯಂತ ಶೋಚನೀಯ ಪರಿಸ್ಥಿತಿಯಲ್ಲಿ ವಿನಾಯಕ ಸೋನಶೇಟ್ ಜೀವಿಸುತ್ತಿದ್ದು, ಕಾರವಾರದ ಜನಶಕ್ತಿ ವೇದಿಕೆಯವರಿಗೆ ಈ ವಿಷಯ ತಲುಪಿತು. ಪೊಲೀಸ್, ಆರೋಗ್ಯ ಇಲಾಖೆ, ತಾಲೂಕು ಆಡಳಿತ ಹಾಗೂ ರೆಡ್ ಕ್ರಾಸ್ ಸಹಯೋಗದಲ್ಲಿ ರಹಸ್ಯ ಕಾರ್ಯಾಚರಣೆ ನಡೆಸಿದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಬಂಧನದಲ್ಲಿದ್ದ ವಿನಾಯಕ ಸೋನಶೇಟ್ ಅವರನ್ನು ಬಿಡುಗಡೆ ಮಾಡಿದರು. ಅವರಿಗೆ ತುರ್ತಾಗಿ ವೈದ್ಯಕೀಯ ಸೇವೆಯನ್ನು ಒದಗಿಸಿದರು.
ಆಲೂರಿನ ಕಬ್ಬಿನಗದ್ದೆಯೊಳಗೆ ರಾಡಿ ನೀರಿನಲ್ಲಿ ಸಂಚರಿಸಿದ ರಕ್ಷಣಾ ಘಟಕದವರು ಮೊದಲು ದನದ ಕೊಟ್ಟಿಗೆ ಪ್ರವೇಶಿಸಿದರು. ಆಗ, ಅಲ್ಲಿ ವಾಸಕ್ಕೆ ಯೋಗ್ಯವಿಲ್ಲದ ಕಟ್ಟಡದಲ್ಲಿನ ಕಿಟಕಿಗೆ ಸರಪಳಿ ಬಿಗಿದು ವಿನಾಯಕ ಸೋನಶೇಟ್ ಅವರನ್ನು ಕಟ್ಟಿ ಹಾಕಿರುವುದು ಕಾಣಿಸಿತು. ಪೇಂಟಿ0ಗ್ ಡಬ್ಬಿಯಲ್ಲಿ ವಿನಾಯಕ ಸೋನಶೇಟ್ ಅವರಿಗೆ ಕುಡಿಯಲು ನೀರಿಟ್ಟಿದ್ದು, ಸ್ನಾನ-ಶೌಚಕ್ಕೂ ಅದೇ ನೀರು ಬಳಸುವ ಷರತ್ತು ವಿಧಿಸಲಾಗಿತ್ತು. ಮಲಗಲು ಹಾಸಿಗೆ-ದಿಂಬು ಸಹ ಇರಲಿಲ್ಲ. ದಿನಕ್ಕೆ ಒಂದು ಹೊತ್ತಿನ ಊಟ ಮಾತ್ರ ನೀಡುತ್ತಿರುವುದು ಗಮನಕ್ಕೆ ಬಂದಿತು.
ಪ್ರಾಣಿಗಳು ಸಹ ಬದುಕಲು ಸಾಧ್ಯವಾಗದ ಸ್ಥಿತಿಯಲ್ಲಿ 37 ವರ್ಷದ ವಿನಾಯಕ ಶೇಟ್ ಕಳೆದ 10 ವರ್ಷಗಳಿಂದ ವಾಸವಾಗಿರುವುದನ್ನು ನೋಡಿ ಅಲ್ಲಿದ್ದವರು ಅಚ್ಚರಿಗೆ ಒಳಗಾದರು. ರೆಡ್ ಕ್ರಾಸಿನ ರಾಮ ನಾಯ್ಕ, ಬಾಬು ಶೇಖ್, ದಾಂಡೇಲಿ ಪಿಎಸ್‌ಐ ಅಮೀನ್ ಅತ್ತಾರ್, ಎಎಸ್‌ಐ ಸುರೇಶ್, ವೈದ್ಯಾಧಿಕಾರಿ ಡಾ ಅನೀಲಕುಮಾರ ನಾಯ್ಕ, ಆರೋಗ್ಯ ನಿರೀಕ್ಷಕ ಗೋಪಿ ಚೌವ್ಹಾಣ್ ಜೊತೆ ಇನ್ನೂ ಅನೇಕರು ಕಾರ್ಯಾಚರಣೆ ನಡೆಸಿ ವಿನಾಯಕ ಸೋನಶೇಟ್ ಅವರನ್ನು ಬಿಡುಗಡೆ ಮಾಡಿದರು. ಸದ್ಯ ಅವರಿಗೆ ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗಿದ್ದು, ಕುಟುಂಬದವರಿಗೆ ಸಹ ಮನವರಿಕೆ ಮಾಡಲಾಗಿದೆ.
Discussion about this post