ಹುಬ್ಬಳ್ಳಿಯಿಂದ ಯಲ್ಲಾಪುರಕ್ಕೆ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರು ಕಾಡಿನ ಜಲಪಾತದಲ್ಲಿ ಪ್ರವಾಹಕ್ಕೆ ಸಿಲುಕಿದ್ದು, ಅಂತು-ಇoತೂ ಸಾಹಸ ಮಾಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಅರಬೈಲ್ ಘಟ್ಟದ ಬಳಿಯಿರುವ ವಜ್ರ ಜಲಪಾತದಲ್ಲಿ ಸಿಕ್ಕಿಬಿದ್ದವರನ್ನು ಇನ್ನಿತರ ಪ್ರವಾಸಿಗರು ರಕ್ಷಿಸಿದ್ದಾರೆ.
ಸೋಮವಾರ ಹುಬ್ಬಳ್ಳಿಯ ವೈದ್ಯರೊಬ್ಬರು ಸೇರಿ ಕೆಲ ಪ್ರವಾಸಿಗರು ಯಲ್ಲಾಪುರಕ್ಕೆ ಬಂದಿದ್ದರು. ಅವರೆಲ್ಲರೂ ಅರಬೈಲ್ ಕಡೆ ಹೊರಟಿದ್ದು, ಅಲ್ಲಿಂದ ಮುಂದೆ ವಜ್ರ ಜಲಪಾತದ ಕಡೆ ಹೋಗಿದ್ದರು. ಅಪಾಯದ ಬಗ್ಗೆ ಅರಿವಿದ್ದರೂ ಆ ಪ್ರವಾಸಿಗರು ಜಲಪಾತದ ಹತ್ತಿರ ಹೋಗಿದ್ದು, ಮಳೆ ರಭಸಕ್ಕೆ ಏಕಾಏಕಿ ಜಲಪಾತದ ನೀರು ಹೆಚ್ಚಾಯಿತು. ಇದರಿಂದ ಪ್ರವಾಹ ಸೃಷ್ಠಿಯಾಗಿದ್ದು, ಪ್ರವಾಸಿಗರು ನೀರಿನಲ್ಲಿ ಕೊಚ್ಚಿ ಹೋದರು. ಆ ವೇಳೆ ಅವರಿಗೆ ಮರವೊಂದು ಅಡ್ಡಲಾಗಿ ಸಿಕ್ಕಿದ್ದು, ಅದನ್ನು ಹಿಡಿದು ಜೀವ ಉಳಿಸಿಕೊಂಡರು. ಆದರೆ, ಪ್ರವಾಸಿಗರ ಸುತ್ತಲು ನೀರು ಆವರಿಸಿದ್ದರಿಂದ ಆ ಕ್ಷಣಕ್ಕೆ ಇನ್ನದು ದಡಕ್ಕೆ ಬರಲು ಸಾಧ್ಯವಾಗಿರಲಿಲ್ಲ.
ಜಲಪಾತದ ಮೇಲ್ಬಾಗದ ಪ್ರದೇಶದಲ್ಲಿ ಧಾರಾಕಾರ ಮಳೆಯಾಗಿದ್ದರಿಂದ ಏಕಾಏಕಿ ನೀರು ಹೆಚ್ಚಳವಾಗಿದೆ. ಮಳೆ ಹಾಗೂ ಪ್ರವಾಹದ ಬಗ್ಗೆ ಅರಿವಿಲ್ಲದೇ ಜಲಪಾತ ವೀಕ್ಷಣೆಗೆ ಹೋದ ಪ್ರವಾಸಿಗರು ಪೇಚಿಗೆ ಸಿಲುಕಿದ್ದಾರೆ. ಈ ದಿನ ಅನೇಕ ಪ್ರವಾಸಿಗರು ಜಲಪಾತ ವೀಕ್ಷಣೆಗೆ ಆಗಮಿಸಿದ್ದು, ಅವರೆಲ್ಲರೂ ಅಪಾಯದ ಸನ್ನಿವೇಶವನ್ನು ಮೊಬೈಲ್ ಕ್ಯಾಮರಾದಲ್ಲಿ ಚಿತ್ರಿಸಿಕೊಂಡರು. ಕೆಲ ಗಂಟೆಗಳ ಬಳಿಕ ಜಲಪಾತದ ನೀರು ಕಡಿಮೆಯಾಗಿದ್ದು, ಆಗ ನೀರಿನಲ್ಲಿ ಸಿಲುಕಿದ್ದ ಜನ ದಡ ಸೇರಿದ್ದಾರೆ. ಈ ಎಲ್ಲಾ ವಿಡಿಯೋ ಇದೀಗ ವೈರಲ್ ಆಗಿದೆ.
ಉತ್ತರ ಕನ್ನಡ ಜಿಲ್ಲೆಯ ಅನೇಕ ಕಡೆ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಈ ಹಿನ್ನಲೆ ನೀರಿರುವ ಸ್ಥಳಗಳಿಗೆ ತೆರಳದಂತೆ ಜಿಲ್ಲಾಡಳಿತ ಸಹ ಸೂಚನೆ ನೀಡಿದೆ. ಅದಾಗಿಯೂ, ಪ್ರವಾಸಿಗರು ಪ್ರವಾಸಿ ಕೇಂದ್ರಗಳಲ್ಲಿ ಹುಚ್ಚಾಟ ನಡೆಸುತ್ತಿದ್ದಾರೆ. ಹೀಗಾಗಿ ಕಡಲತೀರ ಹಾಗೂ ವಿವಿಧ ಜಲಪಾತಗಳ ಪ್ರವೇಶವನ್ನು ನಿಷೇಧಿಸಲಾಗಿದೆ.
ಪ್ರವಾಸಿಗರು ಪ್ರವಾಹಕ್ಕೆ ಸಿಲುಕಿದ್ದ ವಿಡಿಯೋ ಇಲ್ಲಿ ನೋಡಿ..
Discussion about this post