ಶಿರಸಿ-ಯಲ್ಲಾಪುರ ಮಾರ್ಗದ ಬಸ್ ನಿಲುಗಡೆ ಸಮಸ್ಯೆ ಬಗ್ಗೆ ಯಲ್ಲಾಪುರದ ಚಂದ್ಗುಳಿ ಭಾಗದ ಬಿಜೆಪಿ ಘಟಕದವರು ಹೋರಾಟದ ಎಚ್ಚರಿಕೆ ನೀಡಿದ್ದು, ಅದರ ಬೆನ್ನಲ್ಲೆ ಕಾಂಗ್ರೆಸ್ ಬೆಂಬಲಿತರು ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ತಮ್ಮದೇ ಆಡಳಿತವಿದ್ದರೂ ಬಸ್ ನಿಲುಗಡೆ ಸಮಸ್ಯೆ ಬಗೆಹರಿಸಲಾಗದೇ ಶಾಸಕರ ಆಪ್ತರು ಅಧಿಕಾರಿಗಳ ಬಳಿ ಅಂಗಲಾಚಿರುವುದನ್ನು ಬಿಜೆಪಿ ಘಟಕ ಅಣಕಿಸಿದೆ.
ಚಂದಗುಳಿ ಗ್ರಾ ಪಂ ವ್ಯಾಪ್ತಿಯ ಉಪಳೇಶ್ವರ, ಜಂಬೆಸಾಲ, ಹುತ್ಕಂಡ ಕ್ರಾಸ್, ಮಳಲಗಾಂವ, ಹೊಂಡಗದ್ದೆ ಹಾಗೂ ಮಂಚಿಕೇರಿ ವ್ಯಾಪ್ತಿಯ ತೂಕದ ಬೈಲ್, ಕೋಡಿಗದ್ದೆ ಭಾಗದ ವಿದ್ಯಾರ್ಥಿಗಳಿಗೆ ಅಗತ್ಯ ಸಮಯಕ್ಕೆ ಬಸ್ ಇಲ್ಲದ ಬಗ್ಗೆ ಗ್ರಾಮ ಪಂಚಾಯತಿ ಸದಸ್ಯ ಆರ್ ಎಸ್ ಭಟ್ ಮತ್ತು ಅಶೋಕ್ ಮರಾಠಿ ಮುಂದಾಳತ್ವದಲ್ಲಿ ಅನೇಕರು ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದರು. ಈ ವೇಳೆ ಘಟಕದ ವ್ಯವಸ್ಥಾಪಕರು ವಿದ್ಯಾರ್ಥಿಗಳ ಅನುಕೂಲಕ್ಕೆ ಬಸ್ ಬಿಡುವ ಭರವಸೆ ನೀಡಿದರು.
`ಬಿಜೆಪಿಗರು ಬಸ್ ಸಮಸ್ಯೆ ವಿವರಿಸಿದ ನಂತರ ಶಾಸಕರ ಬಲಗೈ ಎಂದು ಬಿಂಬಿಸಿಕೊoಡಿರುವ ಜನ ಅದೇ ಸಮಸ್ಯೆ ವಿಷಯವಾಗಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಶಾಸಕರಿಂದ ಅಧಿಕಾರಿಗಳಿಗೆ ಒಂದು ಫೋನ್ ಮಾಡಿಸಿದರೂ ವಿದ್ಯಾರ್ಥಿಗಳ ಬಸ್ ಸಮಸ್ಯೆ ಬಗೆಹರಿಯಲಿದ್ದು, ಅದರ ಬದಲಾಗಿ ಆಡಳಿತ ಪಕ್ಷದ ಅಧಿಕಾದಲ್ಲಿರುವವರೇ ಅಧಿಕಾರಿಗಳ ಬಳಿ ಅಂಗಲಾಚುತ್ತಿರುವುದು ನಾಚಿಕೆಯ ವಿಷಯ’ ಎಂದು ಚಂದ್ಗುಳಿ ಭಾಗದ ಬಿಜೆಪಿಗರು ವ್ಯಂಗ್ಯವಾಡಿದ್ದಾರೆ.
`ಬಿಜೆಪಿ ಎಚ್ಚರಿಕೆ ನಂತರ ಕಾಂಗ್ರೆಸ್ಸಿಗೆ ಎಚ್ಚರವಾಗಿದೆ. ಅಲ್ಲಿಯವರೆಗೆ ವಿದ್ಯಾರ್ಥಿಗಳ ಸಮಸ್ಯೆಯನ್ನು ಯಾರೂ ಆಲಿಸಲು ಬಂದಿರಲಿಲ್ಲ. ಬಿಜೆಪಿ ಹೋರಾಟಕ್ಕೆ ಯಶಸ್ಸು ಸಿಕ್ಕಿದ್ದು, ಶಾಸಕರ ಆಪ್ತರಾದ ಕಾಂಗ್ರೆಸ್ಸಿಗರು ಅದು ತಮ್ಮ ಹೋರಾಟ ಎಂದು ಬಿಂಬಿಸಿಕೊಳ್ಳುವ ಪ್ರಯತ್ನದ ಸಲುವಾಗಿ ಮನವಿ ಕೊಟ್ಟ ಹಾಗೇ ಮಾಡಿದ್ದಾರೆ’ ಎಂದು ಬಿಜೆಪಿ ಮುಖಂಡ ಅಪ್ಪು ಆಚಾರಿ ಹೇಳಿದ್ದಾರೆ.
Discussion about this post