ಶ್ರಾದ್ದದ ದಿನ ಸಾವಿರಾರು ಬಡವರಿಗೆ ಊಟ ಬಡಿಸಲಾಯಿತು. ಅಲ್ಲಿ ನೆರೆದಿದ್ದವರು ನಾಳೆಯೂ ಇದೆಯಾ? ಎಂದು ಪ್ರಶ್ನಿಸಿದರು. ಮರುದಿನ ಶ್ರಾದ್ಧ ಇರಲಿಲ್ಲ. ಆದರೆ, ಊಟ ಇಲ್ಲ ಎನ್ನಲು ಯಾರಿಗೂ ಮನಸ್ಸು ಬರಲಿಲ್ಲ…
ಹೀಗಾಗಿಯೇ ಕಳೆದ ಐದು ವರ್ಷಗಳಿಂದ ‘ಅದಮ್ಯ ಚೈತನ್ಯ’ ಹಸಿದ ಹೊಟ್ಟೆಗಳಿಗೆ ಉಚಿತ ಊಟ ನೀಡುತ್ತಿದೆ. ನಿತ್ಯ ಸರಿಸುಮಾರು 50ಸಾವಿರ ಜನ ಕೇಂದ್ರದ ಮಾಜಿ ಸಚಿವ ಅನಂತಕುಮಾರ ಅವರ ನೆನಪಿನ ಅಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಶುಚಿ-ಋಚಿ ಜೊತೆ ಸಾತ್ವಿಕ ಬೋಜನ ಇಲ್ಲಿನ ವಿಶೇಷ. ಅನ್ನ, ಅಕ್ಷರ, ಆರೋಗ್ಯದ ಜೊತೆ ಪರಿಸರ ಸಂರಕ್ಷಣೆಗಾಗಿ ಬೆಂಗಳೂರಿನ ‘ಅದಮ್ಯ ಚೈತನ್ಯ’ ಶ್ರಮಿಸುತ್ತಿದೆ. ಕೇಂದ್ರ ಸರ್ಕಾರದ ಮಾಜಿ ಸಚಿವ ಅನಂತಕುಮಾರ ಅವರ ಪತ್ನಿ ತೇಜಸ್ವಿನಿ ಅವರು ಅದಮ್ಯ ಚೈತನ್ಯದ ರೂವಾರಿ.
ಬೆಂಗಳೂರಿನ ಗವಿಪುರಕ್ಕೆ ಹೋದರೆ ಅಲ್ಲಿ ಡಾ ತೇಜಸ್ವಿನಿ ಎಂಬ ಅನ್ನಪೂರ್ಣೇಶ್ವರಿ ಮಾತಿಗೆ ಸಿಗುತ್ತಾರೆ. ಬ್ಯಾಗಿನಲ್ಲಿ ಊಟದ ತಟ್ಟೆ, ಲೋಟದ ಜೊತೆ ಓಡಾಡುವ ಅವರು ಎಲ್ಲಿ ಹೋದರೂ ತಮ್ಮ ಊಟಕ್ಕೆ ಅದನ್ನೇ ಬಳಸುತ್ತಾರೆ. ಈ ಬಗ್ಗೆ ಕುತೂಹಲದಿಂದ ಕೇಳಿದಾಗ ಪರಿಸರದ ಮೇಲಿನ ಒತ್ತಡ ತಡೆಗೆ ಈ ವಿಧಾನ ಅನುಸಿರುತ್ತಿರುವ ಬಗ್ಗೆ ಅರಿವಾಯಿತು. ‘ಪ್ಲಾಸ್ಟಿಕ್ ಹಾಗೂ ಕಾಗದದ ತಟ್ಟೆ ಊಟದ ಬದಲು ಸ್ಟೀಲ್ ಬಳಕೆ ಮಾಡಬೇಕು. ಈ ಒಂದು ಸಣ್ಣ ಬದಲಾವಣೆ ದೊಡ್ಡ ಪರಿಣಾಮ ತರಲಿದೆ’ ಎಂದವರು ಆತ್ಮವಿಶ್ವಾಸದಿಂದ ಮಾತನಾಡಿದರು. ಇದೇ ನಿಲುವಿನ ಅಡಿ ತೇಜಸ್ವಿನಿ ಅವರು 26 ಪ್ಲೇಟ್ ಬ್ಯಾಂಕ್ ಸ್ಥಾಪನೆ ಮಾಡಿದ್ದಾರೆ. ಯಾವುದೇ ಸಭೆ-ಸಮಾರಂಬಗಳ ಊಟಕ್ಕಾಗಿ ಇಲ್ಲಿಂದ ಉಚಿತವಾಗಿ ತಟ್ಟೆ-ಲೋಟ-ಚಮಚಪಡೆಯಬಹುದು. ‘ಅದನ್ನು ಶುಚಿಯಾಗಿ ಬಳಸಬೇಕು. ಶುಚಿಯಾಗಿ ಮರಳಿಸಬೇಕು’ ಎಂಬುದು ಮಾತ್ರ ಇಲ್ಲಿನ ನಿಯಮ. ನಿಮ್ಮೂರಿನ ಶಾಲೆ-ದೇವಾಲಯಗಳಲ್ಲಿಯೂ ಪ್ಲೇಟ್ ಬ್ಯಾಂಕ್ ಸ್ಥಾಪನೆಗೆ ಯೋಚಿಸುತ್ತಿದ್ದರೆ ಅದಕ್ಕೆ ಅದಮ್ಯ ಚೈತನ್ಯದ ಬೆಂಬಲ ಸಿಗುತ್ತದೆ. ಈ ಎಲ್ಲಾ ವಿಷಯ ಮಾತನಾಡುವ ವೇಳೆ ಊಟ ಮುಗಿದಿದ್ದು, ತೇಜಸ್ವಿನಿ ಅವರು ತಾವು ಊಟ ಮಾಡಿದ ತಟ್ಟೆ-ಲೋಟ ತೊಳೆದು ಬ್ಯಾಗಿನೊಳಗೆ ಹಾಕಿಕೊಂಡರು.
ಕಸವೇ ಕಾಣದ ಅಡುಗೆಮನೆ!
ಒಂದು ಲಕ್ಷ ಜನರಿಗೆ ಅಡುಗೆ ಸಾಮರ್ಥ್ಯ ಹೊಂದಿರುವ ಅದಮ್ಯ ಚೈತನ್ಯದ ಅಡುಗೆ ಮನೆಯಲ್ಲಿ ಕಸದ ಬುಟ್ಟಿಯೇ ಇಲ್ಲ. ಕಾರಣ ಅಲ್ಲಿನ ಕಸವನ್ನು ಸಹ ಸಂಪೂರ್ಣವಾಗಿ ಮರುಬಳಕೆ ಮಾಡಲಾಗುತ್ತದೆ. ಅಡುಗೆ ಮಾಡಲು ಗ್ಯಾಸ್, ಡಿಸೇಲ್ ಬದಲು ಒಣಕಸ ಒಟ್ಟುಗೂಡಿಸಿ ನಿರ್ಮಿಸಿದ ಬ್ರಿಕೆಟ್ಸ ಬಳಸಲಾಗುತ್ತದೆ. ಬ್ರಿಕೆಟ್ಸ ಸುಟ್ಟಾಗ ಬರುವ ಬೂದಿಯನ್ನು ಸಹ ಗಿಡಕ್ಕೆ ಗೊಬ್ಬರವಾಗಿ ಬಳಸಲಾಗುತ್ತದೆ. ಅದಮ್ಯ ಚೈತನ್ಯದಿಂದ ‘ಹಸಿರು ಭಾನುವಾರ’ ಎಂಬ ಅಭಿಯಾನದ ಅಡಿ ಪ್ರತಿ ಭಾನುವಾರ ಗಿಡ ನೆಡುವ ಕಾರ್ಯಕ್ರಮ ನಡೆಯುತ್ತಿದ್ದು, ನಿತ್ಯದ ಊಟಕ್ಕಾಗಿ ಅಕ್ಕಿ ತೊಳೆದ ಪೌಷ್ಟಿಕ ನೀರನ್ನು ಆ ಗಿಡಗಳಿಗೆ ಉಣಿಸಲಾಗುತ್ತದೆ. ಇದರಿಂದ ಅನಂತರ ಹೆಸರು ಅಜರಾ’ಮರ’ವಾಗಿ ಬೆಳೆಯುತ್ತಿದೆ.
ಬೆಂಗಳೂರಿನಲ್ಲಿ ಶುರುವಾದ ಅನ್ನದಾನದ ಯೋಜನೆ ಹುಬ್ಬಳ್ಳಿ-ಕಲಬುರ್ಗಿಗೂ ವಿಸ್ತರಿಸಿದೆ. ಕೋವಿಡ್ ಅವಧಿಯಲ್ಲಿಯೂ ಅನ್ನದಾನಕ್ಕೆ ರಜೆ ನೀಡಿಲ್ಲ. ಜೋದಪುರ, ಅಯೋಧ್ಯದಲ್ಲಿ ಸಹ ಅನ್ನದಾನ ಸೇವೆ ಶುರುವಾಗಲಿದೆ. ಪ್ರತಿ ದಿನ ಬೇರೆ ಬೇರೆ ವಿಧಾನದ ಮಸಾಲ ಬಳಸಿ ಬಗೆ ಬಗೆಯ ಖಾದ್ಯ ತಯಾರಿಕೆ ಇಲ್ಲಿನ ವಿಶೇಷ. ಬಳಸಿ ಬಿಸಾಡುವ ತೆಂಗಿನ ಚಿಪ್ಪನ್ನು ಸಹ ಮಸಾಲೆ ಹೊರಿಯಲು ಬಳಸಲಾಗುತ್ತದೆ. ಕನಿಷ್ಟ 2500ರೂ ದೇಣಿಗೆ ನೀಡಿದರೆ ನೀವು ಸಹ ಅನ್ನದಾನದ ಪುಣ್ಯಕಾರ್ಯದಲ್ಲಿ ಕೈ ಜೋಡಿಸಲು ಸಾಧ್ಯ.
135 ಜನ ಅಡುಗೆ ಸಿಬ್ಬಂದಿ ಇಲ್ಲಿದ್ದಾರೆ. ಎಲ್ಲರೂ ಸೇವಾ ಮನೋಭಾವನೆಯಿಂದ ದುಡಿಯುತ್ತಿದ್ದಾರೆ. ಇನ್ನೂ ತರಕಾರಿ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದನೆ, ಹಾಲಿನ ಪ್ಯಾಕೇಟಿನ ಅಲಂಕಾರಿಕ ಸಾಧನ ನಿರ್ಮಾಣ, ಸಾಂಬಾರ್ ಸರೋವರ, ಅಕ್ಕಿಯ ಚೀಲದಿಂದ ಬ್ಯಾಗ್ ತಯಾರಿಕೆ ಸೇರಿ ಕಸದಿಂದ ರಸ ತೆಗೆಯುವ ಅನೇಕ ವಿಧಾನಗಳನ್ನು ಇಲ್ಲಿ ನೋಡಲು ಸಾಧ್ಯ. ಇಲ್ಲಿ ಊಟದ ನಂತರ ತಾಟು ತೊಳೆಯುವ ಬ್ರೆಶ್ ಸಹ ಸಾವಯವ ಎಂಬುದು ಗಮನಿಸಬೇಕಾದ ಅಂಶ.
ಅದಮ್ಯ ಚೈತನ್ಯ ಪರಸರ ಕಾಳಜಿ ಬಗ್ಗೆ ಮನೆ ಮನೆ ಮಹಿಳೆಯರಿಗೆ ತರಬೇತಿ ನೀಡುವ ಗುರಿ ಹೊಂದಿದೆ. ಅನಂತ ಹಸಿರು ಜೀವನಶೈಲಿ ಪರಿಕರ ಕೇಂದ್ರವನ್ನು ಎಲ್ಲಡೆ ಸ್ಥಾಪಿಸುವ ಉದ್ದೇಶದೊಂದಿಗೆ ಮುನ್ನಡೆಯುತ್ತಿದೆ.

ಮಾಹಿತಿ ಹಾಗೂ ಸಂವಹನ ಸಹಕಾರ: ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ)
Discussion about this post