ಶಿರಸಿ ಹಾಗೂ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದ ಗುರು ಹೆಗಡೆ ಅವರ ನಿಧನಕ್ಕೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.
ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಈ ವೇಳೆ ಗುರು ಹೆಗಡೆ ಅವರ ಕಾರ್ಯವೈಖರಿಯನ್ನು ಸ್ಮರಿಸಿದ್ದಾರೆ. `ಕಾರವಾರದಲ್ಲಿ ಕನ್ನಡಪ್ರಭ ವರದಿಗಾರರಾಗಿದ್ದ ಗುರು ಹೆಗಡೆ ಅವರು ವಸ್ತುನಿಷ್ಠ ವರದಿ ಮಾಡುತ್ತಿದ್ದರು’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡಿಗ್ರಸ್ ಹೇಳಿದ್ದಾರೆ.
`ಗುರು ಹೆಗಡೆ ಅವರು ಇನ್ನೂ ಅನೇಕ ವರ್ಷಗಳ ಕಾಲ ಸಾರ್ವಜನಿಕ ಸೇವೆ ಮಾಡಬೇಕಿತ್ತು. ಪತ್ರಿಕಾರಂಗದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕಿತ್ತು. ಅವರ ನಿಧನವು ಉತ್ತರ ಕನ್ನಡ ಜಿಲ್ಲೆಯ ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟ’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
`ಶಿರಸಿಯಲ್ಲಿ ಪತ್ರಕರ್ತರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿ, ನಂತರ ಕಾರವಾರದಲ್ಲಿ ಕೆಲಸ ಮಾಡಿದ ಗುರು ಹೆಗಡೆ ಅವರ ನಿಧನ ಸುದ್ದಿ ಕೇಳಿ ಆಘಾತವಾಯಿತು’ ಎಂದು ಮಂಕಾಳು ವೈದ್ಯ ಅವರು ಪ್ರತಿಕ್ರಿಯಿಸಿದ್ದಾರೆ. `ಅವರ ನಿಧನದಿಂದ ನಾವು ಒಬ್ಬ ಉತ್ತಮ ಯುವ ಪತ್ರಕರ್ತನನ್ನು ಮಾತ್ರವಲ್ಲದೆ ಒಬ್ಬ ಒಳ್ಳೆಯ ವ್ಯಕ್ತಿಯನ್ನೂ ಕಳೆದುಕೊಂಡಿದ್ದೇವೆ’ ಎಂದವರು ಹೇಳಿದ್ದಾರೆ.
`ಗುರು ಹೆಗಡೆ ಅವರು ಹೃದಯವಂತರಾಗಿದ್ದರು. ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಾತನಾಡುತ್ತಿದ್ದರು. ವಿವಿಧ ಆಯಾಮಗಳಲ್ಲಿ ಸುದ್ದಿ ಗುರುತಿಸಿ, ಸಂಗ್ರಹಿಸುತ್ತಿದ್ದರು. ಅವರ ಅಕಾಲಿಕ ನಿಧನ ಪತ್ರಿಕಾ ರಂಗಕ್ಕೆ ನಷ್ಟವನ್ನುಂಟುಮಾಡಿದೆ’ ಎಂದು ಆಗ್ನೇಲ್ ರೋಡಿಗ್ರಸ್ ಹೇಳಿದ್ದಾರೆ.
ಗುರು ಹೆಗಡೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅನೇಕ ಗಣ್ಯರು ಪ್ರಾರ್ಥಿಸಿದ್ದಾರೆ.
Discussion about this post